ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯ ಮತ್ತು ಆರೋಗ್ಯದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹೆಡ್ ಕಾನ್‌ಸ್ಟೇಬಲ್ ಸ್ವರೂಪ್ ಕೊಟ್ಟೂರು ಉದ್ಘಾಟಿಸಿದರು. ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ, ಗುಡೇಕೋಟೆ ವಲಯ ಮೇಲ್ವಿಚಾರಕ ಕರಿಯಪ್ಪ, ಒಕ್ಕೂಟದ ಉಪಾಧ್ಯಕ್ಷೆ ಅಕ್ಕಮಹಾದೇವಿ, ಕೋಶಾಧಿಕಾರಿ ಸುಮಂಗಲಾ ಇತರರಿದ್ದರು.
ಕೂಡ್ಲಿಗಿ: ದಿನನಿತ್ಯ ಸೇವಿಸುವ ಆಹಾರದ ಮೇಲೆ ಅರೋಗ್ಯ ನಿಂತಿದೆ ಎಂದು ಗುಡೇಕೋಟೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸ್ವರೂಪ್ ಕೊಟ್ಟೂರು ಹೇಳಿದರು.
ತಾಲೂಕಿನ ಗುಡೇಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಮತ್ತು ಆರೋಗ್ಯದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛ, ಪೌಷ್ಟಿಕ, ಸಂತುಲಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಕೃಷಿ ಬಿಟ್ಟರೆ ನಮ್ಮ ಅಡುಗೆ ಮನೆ ಇಂಥ ಆಹಾರ ಒದಗಿಸುತ್ತದೆ. ಜೀವನ ಶೈಲಿಯ ಮೇಲೂ ಆರೋಗ್ಯ ಅವಲಂಬಿತವಾಗಿದೆ. ಆಹಾರ ಸೇರಿ ಸುತ್ತಲಿನ ಪರಿಸರ ವಿಷಯುಕ್ತವಾಗಿದೆ. ಆದ್ದರಿಂದ ಮಾರುಕಟ್ಟೆಯಿಂದ ತಂದ ಪದಾರ್ಥಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ. ಸೊಪ್ಪು, ತರಕಾರಿಗಳನ್ನು ಬಿಸಿ ನೀರಿನಲ್ಲಿ ಉಪ್ಪು, ಸೋಡಾಪುಡಿ ಹಾಕಿ ನೆನೆಸಿಟ್ಟು ಚೆನ್ನಾಗಿ ತೊಳೆಯಿರಿ.
ಅಗತ್ಯ ಆಹಾರ ಧಾನ್ಯ ಹಾಗೂ ತರಕಾರಿಗಳನ್ನು ಸ್ವತಃ ಬೆಳೆಯಲು ಪ್ರಯತ್ನಿಸಿ. ಜತೆಗೆ ಋತುಮಾನಕ್ಕೆ ತಕ್ಕಂತೆ ಪೌಷ್ಟಿಕ, ನಾರಿನಂಶ ಇರುವ ಆಹಾರ ಸೇವಿಸಿ ಎಂದರು.
ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ, ಗುಡೇಕೋಟೆ ವಲಯ ಮೇಲ್ವಿಚಾರಕ ಕರಿಯಪ್ಪ, ಒಕ್ಕೂಟದ ಉಪಾಧ್ಯಕ್ಷೆ ಅಕ್ಕಮಹಾದೇವಿ, ಕೋಶಾಧಿಕಾರಿ ಸುಮಂಗಲಾ, ಸೇವಾ ಪ್ರತಿನಿಧಿಗಳಾದ ಕವಿತಾ, ಲಕ್ಷ್ಮೀ, ನೇತ್ರಾ, ಸುನಿತಾ, ಸುಷ್ಮಿತಾ ಇತರರಿದ್ದರು.