ಸಂಡೂರು: ದೌಲತ್‌ಪುರ ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ನಿಇಒ ಡಾ.ಐ.ಆರ್.ಅಕ್ಕಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಎಐಡಿಎಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ರಾಜ್ಯ ಸರ್ಕಾರ ಹಟಮಾರಿ ಧೋರಣೆ ಬಿಡದೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಈ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ರೋಹ ಬಗೆದು, ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲು ಹೋರಟಿದೆ ಎಂದು ದೂರಿದರು.
ನಮ್ಮೂರ ಶಾಲೆ ನಮ್ಮೂರಲ್ಲಿ ಉಳಿಯಲಿ ಹಾಗೂ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸುವವರೆಗೂ ಹೋರಾಟ ನಡೆಸಲಾಗುವುದು. ಶಿಕ್ಷಣಕ್ಕಾಗಿ ಅವಿರತ ಪ್ರಯತ್ನ ನಡೆಸಿದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ವಿಚಾರಗಳನ್ನು ಅರ್ಥೈಸಿಕೊಂಡು ಶಾಲೆ ಉಳಿಸಲು ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಬಿಇಒ ಡಾ.ಐ.ಆರ್.ಅಕ್ಕಿ ಮಾತನಾಡಿ, ತಾಲೂಕಿನ ಯಾವುದೇ ಸರ್ಕಾರಿ ಶಾಲೆ ಮುಚ್ಚುವ ಪ್ರಸ್ತಾಪ ಇಲ್ಲ ಎಂದು ಹೇಳಿದರು. ಗ್ರಾಮಸ್ಥರಾದ ನೀಲಮ್ಮ, ಸತ್ಯಮ್ಮ, ಕುಮಾರಸ್ವಾಮಿ, ಸುನಿಲ್, ಕೃಷ್ಣನಗರದ ಶಫಿ, ಖಾಜಾ, ಹುಚ್ಚಪ್ಪ ಇತರರಿದ್ದರು.