ಜೈಲು ಸಿಬ್ಬಂದಿ ಮೇಲೆ, ಕೈದಿಗಳಿಂದ ಹಲ್ಲೆ

ಜೈಲು ಸಿಬ್ಬಂದಿ ಮೇಲೆ, ಕೈದಿಗಳಿಂದ ಹಲ್ಲೆ
ಜೈಲು ಸಿಬ್ಬಂದಿ ಮೇಲೆ, ಕೈದಿಗಳಿಂದ ಹಲ್ಲೆ
Published on

ಪ್ರಮುಖ ಮುಖ್ಯಾಂಶಗಳು

  • ಸಿಬ್ಬಂದಿ
ಬಳ್ಳಾರಿ : ನಗರದ ಕೇಂದ್ರ ಕಾರಾಗೃಹದ ಕೆಲ ಕೈದಿಗಳು ಸೌಲಭ್ಯ ನೀಡುವಂತೆ ಜೈಲು ಸಿಬ್ಬಂದಿ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಕಾರಾಗೃಹದಲ್ಲಿ ಕಟ್ಟುನಿಟ್ಟಾದ ಆಡಳಿತ ಜಾರಿಗೆ ತರಲಾಗಿದೆ. ಕಳೆದ ಕೆಲ ತಿಂಗಳಿಂದ ಜೈಲಿನ ಭದ್ರತೆ ಹೆಚ್ಚಿಸುವ ಜತೆಗೆ ಬೀಡಿ, ಸಿಗರೇಟ್, ಗಾಂಜಾದಂತಹ ಯಾವುದೇ ನಿಷೇಧಿತ ವಸ್ತುಗಳು ಕೈದಿಗಳಿಗೆ ಸಿಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಇದರಿಂದಾಗಿ ನಿಯಮಗಳ ವಿರುದ್ಧ ಇರುವ ಕೆಲ ಕೈದಿಗಳಲ್ಲಿ ಅಸಮಾಧಾನ ಮೂಡಿದೆ.
ಈ ಹಿನ್ನೆಲೆ ಕೈದಿಗಳಾದ ಅಲ್ತಾಪ್, ರಷೀದ್, ವಿನೋದ್, ಸಲೀಂ ಮತ್ತು ರಾಜು ಸೇರಿ ಒಟ್ಟು ಐವರು ಸಿಗರೇಟ್, ಬೀಡಿ ಸೇರಿದಂತೆ ನಾನಾ ಸೌಕರ್ಯಗಳ ನೀಡಬೇಕು ಎಂಬುದಾಗಿ ಹಠ ಹಿಡಿದಿದ್ದಾರೆ. ನಂತರ ಜೈಲು ಸಿಬ್ಬಂದಿ ಅಶೋಕ ಹೊಸಮನಿ ಅವರ ಜತೆ ಕೈದಿಗಳು ವಾಗ್ವಾದಕ್ಕೆ ಮುಂದಾಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಶೋಕ ಅವರ ಕೈ ಮತ್ತು ಕುತ್ತಿಗೆ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೈದಿಗಳ ಅಶಿಸ್ತಿನ ವರ್ತನೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಕೋಟ್.. ಜೈಲಿನಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕೈದಿಗಳು ಇಂತಹ ಸಣ್ಣ ಪುಟ್ಟ ನೆಪಗಳನ್ನು ಮುಂದಿಟ್ಟುಕೊಂಡು ಜೈಲಿನ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ.
- ಲತಾ, ಜೈಲು ಅಧೀಕ್ಷಕಿ, ಕೇಂದ್ರ ಕಾರಾಗೃಹ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net