ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ತಾಲಾಪ ಮಾಧ್ಯಮ ಕಾರ್ಯಾಗಾರವನ್ನು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಕಾನಿಪ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ, ಮೇಯರ್ ಪಿ.ಗಾದೆಪ್ಪ, ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗುರುರಾಜ್ ಇದ್ದರು.
ಬಳ್ಳಾರಿ : ಮಾಧ್ಯಮಗಳು ವಸ್ತುನಿಷ್ಠತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ತಾಲಾಪ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಕೇವಲ ನಕಾರಾತ್ಮಕ ಸುದ್ದಿಗಳ ಬೆನ್ನು ಹತ್ತಬಾರದು.
ಇಂದಿನ ಯುವ ಪೀಳಿಗೆಯಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನ ಹೆಚ್ಚಾಗುತ್ತಿದ್ದು, ಇದನ್ನು ತಿದ್ದಿ ಸಮಾಜವನ್ನು ಸುಧಾರಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.
ಪಾಲಿಕೆ ಮೇಯರ್‌ಪಿ.ಗಾದೆಪ್ಪ ಮಾತನಾಡಿ, ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮಗಳ ಪಾತ್ರ ಅನನ್ಯ. ಸುದ್ದಿಗಳ ಸತ್ಯಾಸತ್ಯತೆಯನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಶ್ರಮಿಸಬೇಕು ಎಂದರು.
ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಎಚ್. ಅಂಬರೀಶ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ. ಪಾರದರ್ಶಕತೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮಸಭೆ ಕಡ್ಡಾಯಗೊಳಿಸಲಾಗಿದೆ ಎಂದರು.
ವಕೀಲ ಬಿ.ರವೀಂದ್ರನಾಥ್ ಮಾತನಾಡಿ, ಭಾರತೀಯ ನ್ಯಾಯ ಸಂಹಿತೆ ಹಾಗೂ ನಾಗರಿಕ ಸುರಕ್ಷಾ ಸಂಹಿತೆಗಳ ಬಗ್ಗೆ ವಿವರಿಸಿದರು. ನೂತನ ಕಾರ್ಮಿಕ ಸಂಹಿತೆ, ಆರೋಗ್ಯ ಯೋಜನೆಗಳು ಹಾಗೂ ಪಿಎಂ ಸ್ವನಿಧಿ ಯೋಜನೆಗಳ ಕುರಿತು ಅಧಿಕಾರಿಗಳಾದ ಯುವರಾಜ್ ಎಸ್.ವಿ., ಡಾ.ಹನುಮಂತಪ್ಪ ಹಾಗೂ ಡಾ.ಎಸ್. ಸೌಮ್ಯ ಮಾಹಿತಿ ಹಂಚಿಕೊಂಡರು.