ಬಳ್ಳಾರಿ : ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಯಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಪಿ.ಪ್ರಕಾಶ್‌ರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ನಿರಂತವಾಗಿ ಮೋಸ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರವನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟವಾಗುತ್ತಿದ್ದರೂ, ಕ್ರಮ ಕೈಗೊಳ್ಳಬೇಕಾಗಿದ್ದ ಕೃಷಿ ಇಲಾಖೆಯು ಕಣ್ಮುಚ್ಚಿ ಕುಳಿತು, ಅಕ್ರಮವಾಗಿರುವ ಡೀಲರ್‌ಗಳಿಗೆ ಬೆಂಬಲವಾಗಿದೆ ಎಂದು ಆರೋಪಿಸಿದರು.
ಇದರ ಯೂರಿಯಾ ಜತೆಗೆ ಅಗತ್ಯವಿಲ್ಲದಿದ್ದರೂ ಲಿಂಕ್ ಪ್ರಾಡಕ್ಟ್‌ಗಳನ್ನು ರೈತರಿಗೆ ಬಲವಂತವಾಗಿ ಖರೀದಿಸಲು ಒತ್ತಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ತಕ್ಷಣವೇ ಅಗತ್ಯವಿರುವಷ್ಟು ರಸಗೊಬ್ಬರವನ್ನು ಪೂರೈಕೆ ಮಾಡಬೇಕು. ರಸಗೊಬ್ಬರ ಅಕ್ರಮಗಳ ಬಗ್ಗೆ ದೂರು ನೀಡಲು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ಅಧಿಕಾರಿಯ ಮೊಬೈಲ್ ಸಂಖ್ಯೆ ಪ್ರದರ್ಶನ ಫಲಕದಲ್ಲಿ ನಮೂದಿಸಬೇಕು.
ಸಬ್ಸಿಡಿ ರಸಗೊಬ್ಬರದ ಜತೆಗೆ ಡೀಲರ್‌ಗಳಿಗೆ ಲಿಂಕ್ ಪ್ರಾಡಕ್ಟ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು ಹಾಗೂ ಬಲವಂತವಾಗಿ ಮಾರಾಟ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಕಟ್ಟೆಬಸಪ್ಪ, ವಿ.ಯುಗಂಧರ್, ಜಿ.ಖಾದರ್ ಬಾಷ್, ಕೆ.ಜನಾರ್ದನ, ವಿಜಯಕುಮಾರ್ ಇದ್ದರು.