ಗೊಂದಲದ ನಡುವೆ ಅಧ್ಯಕ್ಷ ಆಯ್ಕೆ

ಬಳ್ಳಾರಿಯ ಲಾರಿ ಟರ್ಮಿನಲ್ ಕಚೇರಿಯಲ್ಲಿ ನೂತನ ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ  ಶ್ರೀನಿವಾಸ್ ಮಿಂಚು, ಅಧ್ಯಕ್ಷ ಚಲ್ಲಾ ಮಹೇಶ್ವರ್, ಪಧಾಧಿಕಾರಿಗಳಾದ ವೈ. ಶ್ರೀನಿವಾಸಲು ಜಿ.ಶ್ರೀನಿವಾಸಲು, ಚಲ್ಲ ರಮೇಶ್ ಬಾಬು, ಜಿ.ಲಕ್ಷ್ಮೀನಾರಾಯಣ,  ಎಚ್.ನಾರಾಯಣಸ್ವಾಮಿ, ಬಿ.ಪಾಂಡುರಂಗ, ಸಿ.ಸಂತೋಷ್ ಕುಮಾರ್ ಇತರರಿದ್ದರು.
ಬಳ್ಳಾರಿಯ ಲಾರಿ ಟರ್ಮಿನಲ್ ಕಚೇರಿಯಲ್ಲಿ ನೂತನ ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಿಂಚು, ಅಧ್ಯಕ್ಷ ಚಲ್ಲಾ ಮಹೇಶ್ವರ್, ಪಧಾಧಿಕಾರಿಗಳಾದ ವೈ. ಶ್ರೀನಿವಾಸಲು ಜಿ.ಶ್ರೀನಿವಾಸಲು, ಚಲ್ಲ ರಮೇಶ್ ಬಾಬು, ಜಿ.ಲಕ್ಷ್ಮೀನಾರಾಯಣ, ಎಚ್.ನಾರಾಯಣಸ್ವಾಮಿ, ಬಿ.ಪಾಂಡುರಂಗ, ಸಿ.ಸಂತೋಷ್ ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀನಿವಾಸ್ ಮಿಂಚು ಬಣ ಮೇಲುಗೈ
  • ಹಿರಿಯ ಸದಸ್ಯರು ಆಕ್ಷೇಪ
ಬಳ್ಳಾರಿ : ಇಲ್ಲಿನ ಲಾರಿ ಮಾಲೀಕರ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಎರಡು ಬಣಗಳ ನಡುವಿನ ಗೊಂದಲ, ಸಮಸ್ಯೆಗಳ ನಡುವೆಯೂ ಪಾಲಿಕೆ ಸದಸ್ಯ ಶ್ರೀನಿವಾಸ್ ಮಿಂಚು ಬಣದ ಚಲ್ಲಾ ಮಹೇಶ್ವರ್ ಅವರು ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಜಿ.ಶ್ರೀನಿವಾಸಲು ಸೇರಿ 14 ಜನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀನಿವಾಸ್ ಮಿಂಚು ಬಣ ಮೇಲುಗೈ ಸಾಧಿಸಿದೆ.
ಚಲ್ಲಾ ಮಹೇಶ್ವರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ವಿರೋಧಿಸಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಪೆದ್ದನ್ನ ಸೇರಿ ಅವರ ಬಣದ ಹಿರಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಘದ ನಿಯಮದಂತೆ ಸರ್ವಸದಸ್ಯರ ಸಾಮಾನ್ಯ ಸಭೆ ಕರೆದು ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಿಂಚು ಮತ್ತವರ ಬಣ, ಹಿಂದೆ ನಿಮ್ಮ ಅವಧಿಯಲ್ಲಿ ಯಾವ ರೀತಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿತ್ತೋ ಅದೇ ರೀತಿ ಈ ಬಾರಿಯೂ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ಸಂಘದ ಹಿಂದಿನ ಮೂರು ವರ್ಷಗಳ ವರದಿಯನ್ನು ಆಡಿಟ್ ಮಾಡಿಸಿ, ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳಿಗೆ ಸಲ್ಲಿಸಿದ್ದೇವೆ ಎಂದರು. ಬಳಿಕ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಪದಾಧಿಕಾರಿಗಳಿಗೆ ಶಾಲು ಹಾಕಿ ಸನ್ಮಾನಿಸಿದರು.
ಪೊಲೀಸರ ಮಧ್ಯಪ್ರವೇಶ : ಆಯ್ಕೆಗೂ ಮುನ್ನ ಅಸೋಸಿಯೇಷನ್ ಕಚೇರಿಯಲ್ಲಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಮಿಂಚು, ಪೆದ್ದನ್ನ ಬಣಗಳ ನಡುವೆ ವಾದ ವಾಗ್ವಾದಗಳು ನಡೆದಿವೆ. ಸ್ಥಳಕ್ಕೆ ಆಗಮಿಸಿದ್ದ ನಗರ ಡಿವೈಎಸ್ಪಿ ಗೋವಿಂದರಾಜುಲು, ಎಪಿಎಂಸಿ ಸಿಪಿಐ ಮಹಮ್ಮದ್ ರಫೀಕ್ ಮುಂದೆ ಎರಡು ಬಣಗಳ ಮುಖಂಡರು ಹೇಳಿಕೊಂಡಂತೆ ನೂತನ ಪದಾಧಿಕಾರಿಗಳ ಆಯ್ಕೆ ಗೊಂದಲದಿಂದ ಒಂದು ಬಣದವರು ಕಚೇರಿಗೆ ಬೀಗ ಹಾಕಿದರೆ ಮತ್ತೊಂದು ಬಣದವರು ಬೀಗವನ್ನು ಒಡೆದು ಕಚೇರಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಗಲಾಟೆ ಸೃಷ್ಟಿಸುವ ಸಲುವಾಗಿ ಕೆಲ ಕಿಡಿಗೇಡಿಗಳು ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಪಾಲಿಕೆ ಸದಸ್ಯ ಶ್ರೀನಿವಾಸ್ ಮಿಂಚು, ಲಾರಿ ಮಾಲೀಕರ ಅಸೋಸಿಯೇಷನ್‌ನಲ್ಲಿ ಈ ಮೊದಲು ಮೂರು ಬಣಗಳಾಗಿದ್ದವು. ಮೂರು ಬಣಗಳನ್ನೂ ಒಗ್ಗೂಡಿಸಿ, ತಲಾ ಇಬ್ಬರು ಪ್ರಮುಖರನ್ನು ತೆಗೆದುಕೊಂಡು ಅಸೋಸಿಯೇಷನ್‌ಗೆ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ, ಗೌರವಾಧ್ಯಕ್ಷರು ಸೇರಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಸೋಸಿಯೇಷನ್‌ನ ಮೂರು ವರ್ಷಗಳ ವರದಿಯನ್ನು ಸಹ ಆಡಿಟ್ ಮಾಡಿಸಿ, ಅಸೋಸಿಯೇಷನ್‌ನ ಚೌಕಟ್ಟಿನಲ್ಲಿ ಕಾನೂನಾತ್ಮಕವಾಗಿಯೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ : ಲಾರಿ ಮಾಲೀಕರ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಚಲ್ಲಾ ಮಹೇಶ್ವರ್ (ಅಧ್ಯಕ್ಷ), ವೈ. ಶ್ರೀನಿವಾಸಲು (ಉಪಾಧ್ಯಕ್ಷ), ಜಿ.ಶ್ರೀನಿವಾಸಲು (ಕಾರ್ಯದರ್ಶಿ) ಚಲ್ಲ ರಮೇಶ್ ಬಾಬು (ಜಂಟಿ ಕಾರ್ಯದರ್ಶಿ), ಜಿ.ಲಕ್ಷ್ಮೀನಾರಾಯಣ (ಖಜಾಂಚಿ), ಸದಸ್ಯರಾಗಿ ಎಚ್.ನಾರಾಯಣಸ್ವಾಮಿ, ಬಿ.ಪಾಂಡುರಂಗ, ಸಿ.ಸಂತೋಷ್ ಕುಮಾರ್, ಷಾಹಿದ್ ಬಾಷ, ಅನುಂಪಲ್ಲಿ ನಾರಾಯಣಸ್ವಾಮಿ, ಶೇಕ್ಷಾವಲಿ, ಉಮಾಮಹೇಶ್ ಕೆ, ಎನ್.ಚಂದ್ರಶೇಖರ್, ಶಬ್ಬೀರ್ ಬಾಷ ಅವರು ನೇಮಕವಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net