ಸಾಮಾನ್ಯ ಸಭೆ ನಡೆಸದೆ ಅಧ್ಯಕ್ಷ ಆಯ್ಕೆ

ಮೆಹಬೂಬ್ ಬಾಷ್
ಮೆಹಬೂಬ್ ಬಾಷ್
Published on

ಪ್ರಮುಖ ಮುಖ್ಯಾಂಶಗಳು

  • ಘೋಷಿಸಿರುವುದು ನಿಯಮ ಬಾಹಿರ
  • ಪದಾಧಿಕಾರಿಗಳನ್ನು ಘೋಷಿಸಿರುವುದು ಅಸಂವಿಧಾನಿಕ ಕ್ರಮ
ಬಳ್ಳಾರಿ : ಇತ್ತೀಚಿಗೆ ನಡೆದ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸಾಮಾನ್ಯ ಸಭೆ ನಡೆಸದೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಟಿ.ಮುಲ್ಲಾ ಮೆಹಬೂಬ್ ಬಾಷ್ ಹೇಳಿದರು. ನಗರದ ಲಾರಿ ಮಾಲೀಕರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ನಿಯಮಾವಳಿ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೆಲವರು ರಾಜಕೀಯ ಪ್ರಭಾವ ಬಳಸಿ ಸಂಘದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘದಲ್ಲಿ ಸುಮಾರು 300ಕ್ಕೂ ಹೆಚ್ಚು ಸದಸ್ಯರಿದ್ದು, ಅವರ ಅಭಿಪ್ರಾಯ ಪಡೆಯದೇ ಕೆಲವೇ ಜನರು ಹೊರಗಡೆಯಿಂದನೇ ನಿರ್ಧಾರ ತೆಗೆದುಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳನ್ನು ಘೋಷಿಸಿರುವುದು ಅಸಂವಿಧಾನಿಕ ಕ್ರಮವಾಗಿದೆ ಎಂದರು. ಸದ್ಯ, ಲಾರಿ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿರುವ ಚೆಲ್ಲಾ ಮಹೇಶ್ವರ ಅವರಿಗೆ ಸಂಘದಲ್ಲಿ ಸದಸ್ಯತ್ವವೇ ಇಲ್ಲ. ಸದಸ್ಯತ್ವ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಘೋಷಿಸಿರುವುದು ನಿಯಮ ಬಾಹಿರವಾಗಿದೆ. ಅಲ್ಲದೇ, ಮಾಜಿ ಅಧ್ಯಕ್ಷ ಮಿಂಚು ಶ್ರೀನಿವಾಸ್ ಅವರಿಗೂ ಆರಂಭದಲ್ಲಿ ಸದಸ್ಯತ್ವ ಇರಲಿಲ್ಲ. ರಾಜಕೀಯ ಒತ್ತಡದಿಂದ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಬಳಿಕ ಸದಸ್ಯತ್ವ ಕಲ್ಪಿಸಲಾಯಿತು ಎಂದರು.
ಸಂಘದ ಮಾಜಿ ಅಧ್ಯಕ್ಷ ಪೆದ್ದಣ್ಣ, ಉಪಾಧ್ಯಕ್ಷ ವಿಶ್ವನಾಥ ಸೇರಿದಂತೆ ಹಲವರು ಇನ್ನೂ ಅಧಿಕೃತವಾಗಿ ರಾಜೀನಾಮೆ ನೀಡಿಲ್ಲ. ಆದರೂ ಹೊಸ ತಂಡ ಒಂದು ಬಂದು ತಾವೇ ಅಧ್ಯಕ್ಷರು, ಕಾರ್ಯದರ್ಶಿಗಳು ಎಂದು ಘೋಷಿಸಿಕೊಂಡು ದರ್ಪ ತೋರುತ್ತಿದ್ದಾರೆ. ಹಾಲಿ ಇರುವವರೇ ಅಧ್ಯಕ್ಷರಾಗಲಿ, ನಮಗೆ ತೊಂದರೆಯಿಲ್ಲ. ಆದರೆ, ಸಾಮಾನ್ಯ ಸಭೆ ನಡೆದು, ಸದಸ್ಯರ ಅಭಿಪ್ರಾಯ ಪಡೆದು ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. ಮಾಜಿ ಪದಾಧಿಕಾರಿಗಳಾದ ಪೆದ್ದಣ್ಣ , ವಿಶ್ವನಾಥ, ಪ್ರವೀಣ್ ಕುಮಾರ್, ಲಾರಿ ಮಾಲೀಕರಾದ ಪ್ರದೀದ್ ಕುಮಾರ್, ನಾಗರಾಜ್ ನೀಲಕಂಠ ನಾಯ್ಡು ಇದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net