ಕುರುಗೋಡು ತಾಲೂಕಿನ ಮೌಂಟ್ ವ್ಯೆ ಕ್ಯಾಂಪಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ವಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀಸಿದ್ಧಲಿಂಗ ಮಹಾಸ್ವಾಮೀಜಿ ಗೌಡಾ ವಿತರಿಸಲಾಯಿತು. ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಸಂಸದ ಜಗದೀಶ್ ಶೆಟ್ಟರ್, ಸಚಿವ ಎಂ.ಸಿ.ಸುಧಾಕರ್, ಶಾಸಕರಾದ ಬಿ.ಎಂ.ನಾಗರಾಜ, ಬಾದರ್ಲಿ ಹಂಪನಗೌಡ, ಟಿ.ಇ.ಎಚ್.ಆರ್.ಟಿ. ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಇತರರಿದ್ದರು.
ಬಳ್ಳಾರಿ : ಭಾರತೀಯ ಪರಂಪರೆಯು ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿಕೊಟ್ಟಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಹೇಳಿದರು.
ಕುರುಗೋಡು ತಾಲೂಕಿನ ಮೌಂಟ್ ವ್ಯೆ ಕ್ಯಾಂಪಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತವನ್ನು ಸದೃಢ ಮತ್ತು ಸುಭಿಕ್ಷ ರಾಷ್ಟವನ್ನಾಗಿ ಮಾಡುವಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದೆ. ಕಿಷ್ಕಿಂದ ಅಂತಹ ಪವಿತ್ರ ಮಣ್ಣಿನಲ್ಲಿ ಸ್ಥಾಪಿತವಾಗಿರುವ ಈ ವಿಶ್ವವಿದ್ಯಾಲಯವು ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದೆ ಎಂದರು.
ಶಿಕ್ಷಣ ಎನ್ನುವುದು ಒಂದು ನಿರಂತರ ಯಾತ್ರೆ ಮತ್ತು ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಜ್ಞಾನ ಬೆಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ, ಸುಭಿಕ್ಷ ರಾಷ್ಟ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಶಿಕ್ಷಣ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಬಾರದು. ಅದು ಜ್ಞಾನ ಸಂಪಾದನೆಗೆ ಅನುವು ಮಾಡಿಕೊಡುವ ಸಾಧನವಾಗಬೇಕು. ವಿದ್ಯಾರ್ಥಿಗಳು ಕಲಿತ ವಿದ್ಯೆ ದೇಶದ ಏಳಿಗೆಗಾಗಿ ಧಾರೆ ಎರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾತನಾಡಿ, ಕಲ್ಯಾಣ ಕರ್ನಾಟಕದಂತಹ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟುವುದು ಸವಾಲಿನ ಕೆಲಸ. ಈ ಸವಾಲುಗಳ ನಡುವೆಯೂ ವಿಶ್ವವಿದ್ಯಾಲಯವು ಎರಡು ವರ್ಷ ಪೂರೈಸಿ ಪ್ರಥಮ ಘಟಿಕೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ದೇಶದ ನಾನಾ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿವೆ. ಈ ಪೈಪೋಟಿಯ ನಡುವೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆಗಳು ಯಶಸ್ವಿಯಾಗಬೇಕು ಎಂದರು.
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಈ ವಿಶ್ವವಿದ್ಯಾಲಯವು ಈ ಭಾಗದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ನೆಲದಲ್ಲೇ ಉನ್ನತ ಶಿಕ್ಷಣ ಲಭಿಸುವಂತಾಗಬೇಕು. ಕೇವಲ ಪದವಿ ಪಡೆಯುವುದು ಶಿಕ್ಷಣದ ಉದ್ದೇಶವಾಗಬಾರದು. ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣದ ಜತೆಗೆ ಕೌಶಲಗಳನ್ನು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀಸಿದ್ಧಲಿಂಗ ಮಹಾಸ್ವಾಮೀಜಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ಬಳಿಕ ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಯ ಕುಲಧಿಪತಿ ಡಾ.ಯಶವಂತ್ ಭೂಪಲ್, ಸಹ ಕುಲಾಧಿಪತಿ ವೈ.ಜೆ.ಪೃಥ್ವಿರಾಜ್, ಕುಲಪತಿ ಪ್ರೊ.ಟಿ.ಎನ್.ನಾಗಭೂಷಣ, ಕುಲಸಚಿವರಾದ ಡಾ.ಯು.ಈರಣ್ಣ, ಡಾ.ರಾಜು ಜಾಡರ್, ಹಣಕಾಸು ಅಧಿಕಾರಿ ವೈ.ನಮ್ರತಾ ಇದ್ದರು.