ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಮಾಜದ ಮುಖಂಡರಾದ ಮಹಾಂತೇಶ್, ವೀರಭದ್ರ, ಗಣೇಶ್ ಇತರರಿದ್ದರು.
ಬಳ್ಳಾರಿ : ಜಿಲ್ಲಾಡಳಿತದಿಂದ ಮಾ.23ರಂದು ದೇವರ ದಾಸಿಮಯ್ಯ, ಮಾ.28ರಂದು ಅಗ್ನಿಬನ್ನಿರಾಯ ಹಾಗೂ ಮಾ.31ರಂದು ಭಗವಾನ್ ಮಹಾವೀರ ಜಯಂತಿ ನಡೆಯಲಿದ್ದು, ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಹನೀಯರ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ದೇವರ ದಾಸಿಮಯ್ಯ ಹಾಗೂ ಅಗ್ನಿಬನ್ನಿರಾಯ ಮಹನೀಯರ ವೇದಿಕೆ ಕಾರ್ಯಕ್ರಮಗಳು ಹೊಂಗಿರಣ ಸಭಾಂಗಣದಲ್ಲಿ ನಡೆಯಲಿದೆ. ಅದೇರೀತಿಯಾಗಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಗರದ ಪಾರ್ಶ್ವನಾಥ ಬಸದಿಯಲ್ಲಿ ಆಯೋಜಿಸಲಾಗುವುದು ಎಂದರು.
ಜಯಂತಿ ಆಚರಣೆ ವೇಳೆ ಡಿಜೆ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಮಾತ್ರ ಬ್ಯಾನರ್ ಅಳವಡಿಸಲು ಅವಕಾಶವಿದ್ದು, ನಗರದ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕುವುದನ್ನು ನಿರ್ಬಂಧಿಸಲಾಗಿದೆ. ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಕ್ತಿ-ಭಾವದಿಂದ ಮಹನೀಯರ ಜಯಂತಿ ಆಚರಿಸೋಣ. ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರಿಗೆ, ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಹನೀಯರ ಆಚಾರ-ವಿಚಾರಗಳನ್ನು ಪರಿಣಿತರಿಂದ ವಿಶೇಷ ಉಪನ್ಯಾಸ ಮೂಲಕ ತಲುಪಿಸಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು. ವಚನ ಸಂಗೀತ ಗಾಯನ ಏರ್ಪಡಿಸಬೇಕು ಎಂದರು.