ಬಳ್ಳಾರಿಯ ಬಿಡಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾನಿಪ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಎಂಎಲ್ಸಿ ವೈ.ಎಂ.ಸತೀಶ್, ಡಿಸಿ ನಾಗೇಂದ್ರ ಪ್ರಸಾದ್, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಕಾನಿಪ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ, ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ ಕುಲಕರ್ಣಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಸವರಾಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.
ಬಳ್ಳಾರಿ : ಸಮಾಜದಲ್ಲಿ ರಾಜಕೀಯ ಹಾಗೂ ಪತ್ರಿಕೋದ್ಯಮ ಎರಡು ಜೋಡೆತ್ತುಗಳಿದ್ದಂತೆ ಎಂದು ಶಾಸಕ ಬಿ.ನಾಗೇಂದ್ರ ಅಭಿಪ್ರಾಯಪಟ್ಟರು.
ನಗರದ ಬಿಡಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025 -28ನೇ ಸಾಲಿನ ಜಿಲ್ಲಾ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಎರಡು ಲಕ್ಷ ರೂ. ನಗದು ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಪತ್ರಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ರಾಜಕಾರಣಿಗಳ ಸಂಕಷ್ಟ ಹೇಗೆ ಇರಲಿದೆ ಎಂಬುದು ಅರ್ಥವಾಗಿರುತ್ತದೆ. ಪತ್ರಕರ್ತರ ಪ್ರಶ್ನೆಗಳು ಸಮಾಜಮುಖಿಯಾಗಿರಲಿ. ಯಾವುದೇ ಮುಲಾಜಿಲ್ಲದೆ ಪ್ರಶ್ನಿಸುವ ಸ್ವಭಾವ ಸ್ವಾಗತಾರ್ಹ. ಆದರೆ, ಸುಳ್ಳು ಸುದ್ದಿಗಳು ಪ್ರಕಟಿಸಿದೆ ನೈಜ ವರದಿಗಳಿಗೆ ಪ್ರಾಮುಖ್ಯತೆ ನೀಡಿ ಎಂದು ಹೇಳಿದರು.
ಶಾಸಕ ನಾರಾಭರತರೆಡ್ಡಿ ಮಾತನಾಡಿ, ಸಮಾಜದಲ್ಲಿ ನಾನಾ ಅಭಿವೃದ್ಧಿ ಕೆಲಸಗಳಿಗೆ ಅನೇಕ ಅಡ್ಡಿ ಆತಂಕಗಳು ಇರುತ್ತವೆ. ಅವುಗಳನ್ನು ಮೀರಿ ಕೆಲಸ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಇನ್ನೂ ಬೆಳೆದು ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವಂತಹ ಕೆಲಸ ಮಾಡಲಿ ಎಂದು ಆಶಿಸಿದರು. ಬಳಿಕ ಕ್ಷೇಮಾಭಿವೃದ್ಧಿ ನಿಧಿಗೆ ಎರಡು ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕೋದ್ಯಮ ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಹೊಣೆಗಾರಿಕೆ ಹೊಂದಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿ ವೇಗವಾಗಿ ಹರಡುವಂತಾಗಿರುವುದರಿಂದ, ಇನ್ನಷ್ಟು ಜವಾಬ್ದಾರಿಯಿಂದ ವರದಿ ಮಾಡಬೇಕಾದ ಅಗತ್ಯವಿದೆ. ಸಂಘಟನೆ ಬಲವಾಗಿದ್ದರೆ ಮಾತ್ರ ಪತ್ರಕರ್ತರ ಹಕ್ಕುಗಳು, ಭದ್ರತೆ ಮತ್ತು ಗೌರವ ಕಾಯ್ದುಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾನಿಪ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎನ್.ಗಂಗಾಧರ, ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಎಸ್.ನಾಗರಾಜ್, ಸಿದ್ದು ಪೂಜಾರ್ ಅವರನ್ನು ಸನ್ಮಾನಿಸಲಾಯಿತು.