ತನಿಖೆಯಲ್ಲಿ ಪೊಲೀಸರ ನಿರ್ಲಕ್ಷೃ

ಆಲಂಬಾಷ
ಆಲಂಬಾಷ
Published on

ಪ್ರಮುಖ ಮುಖ್ಯಾಂಶಗಳು

  • ಆತ್ಮಹತ್ಯೆ ಪ್ರಕರಣ

ಬಳ್ಳಾರಿ :

ಇಲ್ಲಿನ ಕೌಲಬಜಾರ್ ನಿವಾಸಿ ಫಿರ್ದೋಸ್ ಎಂಬ ಯುವತಿಯ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಮೃತಳ ತಂದೆ ಆಲಂಬಾಷ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಪೊಲೀಸರ ವಿಳಂಬ ಧೋರಣೆ ಹಾಗೂ ಆರೋಪಿಗಳಿಗೆ ಸಿಗುತ್ತಿರುವ ರಾಜಕೀಯ ರಕ್ಷಣೆ ವಿರುದ್ಧ ಕಿಡಿಕಾರಿದರು.

ಆರೋಪಿಗಳಾದ ಸೋಹೈಲ್ ಹಾಗೂ ಅಜೀಂ ಎಂಬ ಇಬ್ಬರು ಯುವಕರು ಫಿರ್ದೋಸ್ ಅವರ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಮಾನಸಿಕ ಕಿರುಕುಳಕ್ಕೆ ಹೆದರಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಯುವತಿ ಮೃತಪಟ್ಟು ಒಂಬತ್ತು ದಿನಗಳ ನಂತರ ಪೊಲೀಸರು ಆಕೆಯ ಮೊಬೈಲ್ ಪಂಚನಾಮೆ ನಡೆಸಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ ಎಂದು ಅಕ್ರೋಶ ಹೊರಹಾಕಿದರು.

ನಗರದ ಪಾಲಿಕೆ ಸದಸ್ಯರೊಬ್ಬರ ಬೆಂಬಲ ಆರೋಪಿಗಳಿಗಿರುವುದರಿಂದ ಪೊಲೀಸರು ಈವರೆಗೆ ಅವರನ್ನು ಬಂಧಿಸಿಲ್ಲ. ಪ್ರಕರಣವನ್ನು ವಾಪಸ್ ಪಡೆಯುವಂತೆ ಕೆಲ ದುಷ್ಕರ್ಮಿಗಳು ಬೆದರಿಕೆ ಒಡ್ಡುತ್ತಿದ್ದು, ಜೀವಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ, ತಮ್ಮ ಕಿರಿಯ ಮಗನ ಮೇಲೆಯೂ ಹಲ್ಲೆಗೆ ಯತ್ನಿಸಲಾಗಿದೆ ಎಂದು ದೂರಿದರು. ಆರೋಪಿಗಳನ್ನು ತಕ್ಷಣವೇ ಬಂಧಿಸಿ ತಮ್ಮ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಮೃತಳ ಸಹೋದರರಾದ ಮಹಮ್ಮದ್ ಗೌಸ್, ಅನ್ವರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net