ಕಂಪ್ಲಿಯಲ್ಲಿಲ್ಲ ಪೊಲೀಸ್ ವಸತಿಗೃಹ

ಕಂಪ್ಲಿ ಪೊಲೀಸ್ ಠಾಣೆಯ ಹಳೆಯ ಕಟ್ಟಡ.
ಕಂಪ್ಲಿ ಪೊಲೀಸ್ ಠಾಣೆಯ ಹಳೆಯ ಕಟ್ಟಡ.
Published on
ಕಂಪ್ಲಿ: ಪಟ್ಟಣ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ವಸತಿಗೃಹವಿಲ್ಲದೆ ಬಾಡಿಗೆ ಮನೆಗಳನ್ನು ಅವಲಂಬಿಸಿದ್ದಾರೆ. ಹಳೆಯ ಠಾಣೆ ಕಟ್ಟಡ, ಪುರಸಭೆ ಹಿಂದೆ ಶಿಥಿಲಗೊಂಡ ಕ್ವಾರ್ಟಸ್‌ಗಳಿದ್ದು ತೆರವುಗೊಳಿಸಿ ಹೊಸ ವಸತಿಗೃಹ ನಿರ್ಮಿಸಬೇಕಿದೆ.

ಪೊಲೀಸರು ಸಕಾಲಕ್ಕೆ ಕ್ಷಮತೆಯಿಂದ ಕಾರ್ಯನಿರ್ವಹಿಸಲು, ಕೂಡಲೆ ಕಾರ್ಯಪ್ರವೃತ್ತರಾಗಲು ಮತ್ತು ಕೇಂದ್ರಸ್ಥಾನದಲ್ಲಿರಲು ಸರ್ಕಾರಿ ವಸತಿಗೃಹ ಅಗತ್ಯವಿದೆ. ವಿಲೇಜ್ ಕ್ರೈಮ್ ಹಿಸ್ಟರಿ ಪ್ರಕಾರ 1936ಕ್ಕೂ ಮುನ್ನವೇ ಪಟ್ಟಣದಲ್ಲಿ ಪೊಲೀಸ್ ಠಾಣೆ ಇತ್ತು. ಸದ್ಯ ಠಾಣೆಗೆ ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಆರು ಜನ ಎಎಸ್‌ಐ, 15 ಎಚ್‌ಸಿಗಳು, 31 ಪೇದೆಗಳು ಸೇರಿದಂತೆ ಒಟ್ಟು 55 ಹುದ್ದೆ ಮಂಜೂರಾಗಿದೆ. ಈ ಪೈಕಿ ಎರಡು ಪಿಎಸ್‌ಐ, ಎರಡು ಎಎಸ್‌ಐ ಹಾಗೂ ಎರಡು ಪೇದೆಗಳ ಹುದ್ದೆ ಖಾಲಿ ಇವೆ.
ಠಾಣಾ ವ್ಯಾಪ್ತಿ ಸುಮಾರು 25 ಕಿ.ಮೀ. ಇದ್ದು, ಪುರಸಭೆ, ಏಳು ಗ್ರಾಪಂ., ಮೂರು ತಾಪಂ., ಎರಡು ಜಿಪಂ.ವ್ಯಾಪ್ತಿಯಲ್ಲಿನ 24 ಗ್ರಾಮಗಳು ಹಾಗೂ ಐದು ಕ್ಯಾಂಪ್‌ಗಳು ಒಳಪಟ್ಟಿವೆ. ಸದ್ಯ 14 ಪೊಲೀಸ್ ವಸತಿಗೃಹಗಳಿದ್ದು, ಇನ್ನೂ 41 ವಸತಿಗೃಹ ಬೇಕಿವೆ. 24 ವಸತಿಗೃಹ ನಿರ್ಮಿಸಲು ಮಂಜೂರಾತಿ ದೊರೆತಿದ್ದು, ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿಲ್ಲ.
ಪುರಸಭೆ ಹಿಂದಿರುವ ಸರ್ವೇ ನಂಬರ್ 1342-1ಬಿ, 2 ಮತ್ತು 7ರಲ್ಲಿ ಒಟ್ಟು 32,727ಚ.ಅಡಿ ಭೂಮಿಯಿದ್ದು, ಈ ಪೈಕಿ 3971 ಚ.ಅಡಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಎಂಟು ವಸತಿಗೃಹಗಳನ್ನು ನಿರ್ಮಿಸಿದ್ದು, ಇವು ಶಿಥಿಲಗೊಂಡು ಹಾಳು ಬಿದ್ದಿವೆ. ಇವುಗಳನ್ನು ತೆರವುಗೊಳಿಸಿ ವಸತಿಗೃಹ ನಿರ್ಮಿಸಬೇಕಿದೆ.
ಠಾಣೆಯ ಹಳೆಯ ಕಟ್ಟಡ 114 ವರ್ಷಗಳ ಹಿಂದಿನದಾಗಿದ್ದು ಇದು ಕೂಡಾ ಶಿಥಿಲಗೊಂಡಿದೆ. ಇದರಿಂದಾಗಿ ಠಾಣೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಠಾಣೆಯ ಹಳೆಯ ಕಟ್ಟಡ ಅಥವಾ ಪುರಸಭೆ ಹಿಂಬದಿಯ ಕ್ವಾರ್ಟರ್ಸ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net