ಬಳ್ಳಾರಿ: ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಪಡೆಯದೇ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ನೌಕರರ ಸಂಘದ ಸಹಯೋಗದೊಂದಿಗೆ ಜಾಗೃತಿ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂಬ ಘೋಷವಾಕ್ಯದೊಂದಿಗೆ ಗುರುವಾರ ಆಯೋಜಿಸಿದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟಾಚಾರ ಮುಕ್ತ ಮತ್ತು ನಶಾಮುಕ್ತ ಭಾರತವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜವಾಬ್ದಾರಿತನ ಕ್ರಮ
ಅಧಿಕಾರಿಗಳು ಮತ್ತು ಸಾರ್ವಜನಿಕರು ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕು. ದೇಶದಲ್ಲಿ ಭ್ರಷ್ಟಾಚಾರ ಹೋಗಲಾಡಿಸಿ, ಅದನ್ನು ಬೇರು ಸಮೇತ ಕಿತ್ತು ಹಾಕಿ ನಿರ್ಮೂಲನೆ ಮಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.
ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆಗೆ ಉತ್ತೇಜನ, ಭ್ರಷ್ಟಾಚಾರ ತಡೆ, ಸರ್ಕಾರಿ ಕ್ಷೇತ್ರಗಳ ವ್ಯವಸ್ಥೆ ಸುಧಾರಣೆ, ಕೆಲಸದಲ್ಲಿ ಪಾರದರ್ಶಕತೆ, ಸರ್ಕಾರಿ ಅಧಿಕಾರಿಗಳ ಜವಾಬ್ದಾರಿತನ ಕ್ರಮ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್‌ಎನ್.ಹೊಸಮನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇರೀತಿಯಾಗಿ ಆರ್ಥಿಕವಾಗಿ ದುರ್ಬಲ ಇರುವವರಿಗೆ ಉಚಿತವಾಗಿ ವಕೀಲರನ್ನು ನೇಮಿಸುವ ಮೂಲಕ ಉಚಿತ ಕಾನೂನು ಸೇವೆ ಒದಗಿಸಲಾಗುತ್ತದೆ ಎಂದು ಹೇಳಿದರು. ಬಳಿಕ ನ್ಯಾಯಾಧೀಶರು ಜಾಗೃತಿ ಸಪ್ತಾಹ ಕಾರ್ಯಕ್ರಮ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿದರು.