ಕುರುಗೋಡು ಪುರಸಭೆಯಲ್ಲಿ ಶನಿವಾರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಟಿ. ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಉಪಸ್ಥಿತರಿದ್ದರು.
ಕುರುಗೋಡು: ಕಳೆದ ವರ್ಷದ ಆಯ-ವ್ಯಯವೇ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಮೂಲಸೌಲಭ್ಯಗಳ ಕೊರತೆಯಿಂದ ಜನರು ರೋಸಿ ಹೋಗಿದ್ದಾರೆ ಎಂದು ಪುರಸಭೆಯಲ್ಲಿ ಶನಿವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನೀರು ಪೂರೈಕೆಗಾಗಿ ಅಗೆದಿರುವ ರಸ್ತೆಗಳನ್ನು ಮುಚ್ಚಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮಾಂಸ ಮಾರುಕಟ್ಟೆ ಸ್ಥಳಾಂತರ, ವಿದ್ಯುತ್ ಕಂಬ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದು 22ನೇ ವಾರ್ಡ್ ಸದಸ್ಯ ವಿ. ವೀರೇಶ್ ಅಸಹಾಯಕತೆ ಹೊರಹಾಕಿದರು.
ಮುಖ್ಯವೃತ್ತದ ಸುತ್ತಮುತ್ತ ವ್ಯಾಪಾರಸ್ಥರು ಕೊಳೆತ ಹಣ್ಣುತರಕಾರಿಗಳನ್ನು ಬೀದಿಗೆ ಎಸೆಯುತ್ತಿದ್ದಾರೆ. ಇದರಿಂದ ವಾತಾವರಣ ಕಲುಷಿತವಾಗುವುದರ ಜತೆಗೆ ಬಿಡಾಡಿ ದನಗಳು ಮುಗಿಬೀಳುತ್ತಿವೆ.
ಇಂತಹವರ ವಿರುದ್ಧ ಪುರಸಭೆ ಸಿಬ್ಬಂದಿ ಕ್ರಮ ಜರುಗಿಸದೆ ಮೌನ ವಹಿಸಿರುವುದು ಏಕೆ ಎಂದು ಸದಸ್ಯ ಮಂಜುನಾಥ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಿತ್ಯ ಬೆಳಗ್ಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ನಿಯಮ ಪಾಲಿಸದವರ ವಿರುದ್ಧ ದಂಡ ವಿಧಿಸುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳು ಸಲ್ಲಿಸುವ ಬಜೆಟ್ ಆಧಾರದ ಮೇಲೆ ರಾಜ್ಯ ಸರ್ಕಾರ ಬಜೆಟ್ ರೂಪಿಸುತ್ತದೆ.
ಸರ್ಕಾರದಿಂದ ದೊರೆಯುವ ಅನುದಾನ ಹಾಗೂ ಪುರಸಭೆಯ ವಿವಿಧ ಮೂಲಗಳಿಂದ ಬರುವ ಆದಾಯದ ಆಧಾರದ ಮೇಲೆ ಪ್ರತಿ ವರ್ಷ ಬಜೆಟ್ ತಯಾರಿಸಬೇಕೆಂಬ ನಿಯಮವಿದೆ. ಅಗತ್ಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಈ ವರ್ಷದ ಬಜೆಟ್‌ನಲ್ಲಿ ಅಳವಡಿಸಿಕೊಂಡು ಎಲ್ಲರೂ ಸೇರಿ ಅನುಷ್ಠಾನಗೊಳಿಸೋಣ ಎಂದು ಹೇಳಿದರು.