ಬಳ್ಳಾರಿಯ ತಾಪಂ ಆಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಡೆಪ್ಯೂಟಿ ಅಕೌಂಟ್ ಜನರಲ್ ಸಚಿನ್ ಕೃಷ್ಣ ಕೌಶಿಕ್ ಉದ್ಘಾಟಿಸಿದರು. ಮಹಾಲೇಖಪಾಲರ ಕಚೇರಿಯ ಸೀನಿಯರ್‌ಗಳಾದ ಡಿ.ಎ.ಜಿ.ಯಶೋಧಾ, ನಾಗಜ್ಯೋತಿ, ಎಂ.ಜೆ.ಶ್ರೀಕಾಂತ್, ಜಿಲ್ಲಾ ಖಜಾನೆಯ ಡಿಡಿ ಶೇಖರಪ್ಪ, ಸಹಾಯಕ ಖಜಾನಾಧಿಕಾರಿ ಪ್ರಭು, ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಇದ್ದರು. ===
ಬಳ್ಳಾರಿ : ಪಿಂಚಣಿ ವಿಲೇವಾರಿ ಪ್ರಕ್ರಿಯೆ ಇನ್ನೂ ಎರಡ್ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಪಿಂಚಣಿ ವಿಭಾಗದ ಡೆಪ್ಯೂಟಿ ಅಕೌಂಟ್ ಜನರಲ್ ಸಚಿನ್ ಕೃಷ್ಣ ಕೌಶಿಕ್ ಹೇಳಿದರು.
ನಗರದ ತಾಪಂ ಆಡಳಿತ ಭವನ ಸಭಾಂಗಣದಲ್ಲಿ ಅಕೌಂಟೆಂಟ್ ಜನರಲ್ ಕಚೇರಿ, ಖಜಾನೆ ಇಲಾಖೆ ಸಹಯೋಗದೊಂದಿಗೆ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್ ಹಾಗೂ ಲೆಕ್ಕಪತ್ರಗಳ ಸಮಸ್ಯೆ ಕುರಿತು ಶುಕ್ರವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿಜಿಟಲೀಕರಣ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಇದರಿಂದ ಪಿಂಚಣಿದಾರರು ತಮ್ಮ ಪಿಪಿಒ ಅನ್ನು ಆನ್‌ಲೈನ್ ಮೂಲಕವೇ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪಾವತಿಯ ಸಲುವಾಗಿ ಖಜಾನೆಗೆ ನೇರವಾಗಿ ಸಲ್ಲಿಸಬಹುದು. ಈ ಪ್ರಕ್ರಿಯೆಯಿಂದಾಗಿ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವ ವಿಳಂಬ ತಪ್ಪಲಿದೆ ಎಂದರು. ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಸೌಲಭ್ಯಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಿಸಲು ಮತ್ತು ವಿಳಂಬವಿಲ್ಲದೆ ಒದಗಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.
ಏ.1ರ ವೇಳೆಗೆ ಕೇವಲ 15 ಮೂಲ ಮತ್ತು 221 ವಿಭಾಗೀಯ ಪ್ರಕರಣಗಳು ಬಾಕಿಯಿದ್ದವು. ಏ.25ರ ವೇಳೆಗೆ ಸುಮಾರು 9,000 ಹೊಸ ಪ್ರಕರಣಗಳು ಬಂದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 30,000 ಪಿಂಚಣಿ ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮಾತನಾಡಿ, ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೂ ಆರು ತಿಂಗಳಿಂದ ಒಂದು ವರ್ಷದವರೆಗೆ ವಿಳಂಬವಾಗುತ್ತಿದೆ. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಸರ್ಕಾರದ ಮಟ್ಟದ ವಿಳಂಬವೋ ತಿಳಿಯುತ್ತಿಲ್ಲ. ಬ್ಯಾಂಕ್ ಮತ್ತು ಇಲಾಖೆಗಳ ನಡುವೆ ಅಲೆದಾಡುವುದು ತಪ್ಪಿಸಿ, ನೇರವಾಗಿ ಬ್ಯಾಂಕ್ ಮಟ್ಟದಲ್ಲೇ ಕೆಲಸಗಳು ಸುಗಮವಾಗಿ ನಡೆಯುವಂತಾಗಬೇಕು ಎಂದರು. ಇದೇ ವೇಳೆ ನಿವೃತ್ತ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಅಹವಾಲುಗಳ ಮೂಲಕ ಸಲ್ಲಿಸಿದರು. ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.