ಬಳ್ಳಾರಿಯ ಸಾಂಸ್ಕೃತಿ ಹೊಂಗಿರಣ ಸಮುಚ್ಛಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಮೇಯರ್ ಪಿ.ಗಾದೆಪ್ಪ, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಕಮಲರತ್ನ ಬಂತೇಜಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.
ಬಳ್ಳಾರಿ : ಗೌತಮ ಬುದ್ಧನು ಯುದ್ಧಕ್ಕಿಂತ ಶಾಂತಿಯೇ ಮೇಲು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸಂಜೆ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತವು ಬುದ್ಧನ ನಾಡು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟವಲ್ಲ, ಬದಲಾಗಿ ಶಾಂತಿ ಮತ್ತು ಅಹಿಂಸೆ ಸಾರಿದ ಬುದ್ಧನ ನಾಡಾಗಿದೆ. ಶಾಂತಿ ಮಂತ್ರವು ಇಂದಿನ ಜಾಗತಿಕ ಯುದ್ಧಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ನಗರದ ಪ್ರಶಾಂತವಾದ ಪ್ರದೇಶದಲ್ಲಿ ಬುದ್ಧನ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡುವ ಆಶಯ ಹೊಂದಲಾಗಿದೆ ಎಂದರು.
ಮೇಯರ್ ಪಿ.ಗಾದೆಪ್ಪ ಮಾತನಾಡಿ, ಗೌತಮ ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಅಹಿಂಸೆ ಮತ್ತು ಶಾಂತಿಯ ಜಾಗತಿಕ ಸಂಕೇತ. ತನ್ನ 29ನೇ ವಯಸ್ಸಿನಲ್ಲೇ ರಾಜ್ಯಭೋಗ, ಪತ್ನಿ, ಮಗು ಮತ್ತು ವೈಭವದ ಜೀವನವನ್ನು ತ್ಯಜಿಸಿ ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಎಂದರು.
ನಗರದ ಎಸ್‌ಎಸ್‌ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಎಚ್.ಸೋಮನಾಥ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಿರುಗುಪ್ಪ ದಳವಾಯಿ ಅಂಬಣ್ಣ ತಂಡದಿಂದ ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಜಯಂತಿ ಅಂಗವಾಗಿ ಸಂಜೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯು ನಗರದ ಡಿಸಿ ಕಚೇರಿಯಿಂದ ಆರಂಭಗೊಂಡು ಸಾಂಸ್ಕೃತಿಕ ಸಮುಚ್ಚಯದ ಸಭಾಂಗಣದವರೆಗೆ ನಡೆಯಿತು.