ಬಳ್ಳಾರಿ : ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಸರ್ಕಾರ ಖರೀದಿಸಿರುವ ಜೋಳದ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ, ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದಲ್ಲಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್)ವತಿಯಿಂದ ಪ್ರತಿಭಟನೆ ನಡೆಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಗೋವಿಂದ್ ಮಾತನಾಡಿ, ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಸಿ ಹಲವು ತಿಂಗಳು ಕಳೆದರೂ ಹಣ ಪಾವತಿಸಿಲ್ಲ. ಕೃಷಿ ಸಾಲ ಮರುಪಾವತಿ, ರಸಗೊಬ್ಬರ, ಬೀಜ, ಕೂಲಿ ವೆಚ್ಚ ಹಾಗೂ ಕುಟುಂಬದ ದೈನಂದಿನ ನಿರ್ವಹಣೆಗೆ ಈ ಹಣ ಅತ್ಯಗತ್ಯವಾಗಿದ್ದು, ವಿಳಂಬದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ವರ್ಷ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆಯೂ ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮಾರಾಟ ಮಾಡಿರುವ ಜೋಳದ ಬಾಕಿ ಹಣ ಶೀಘ್ರ ಬಿಡುಗಡೆ ಮಾಡುವುದು ಅಗತ್ಯವಾಗಿದೆ ಎಂದರು.
ಜೋಳ ಖರೀದಿಯ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಹಣ ಪಾವತಿಯಲ್ಲಿ ಆಗಿರುವ ವಿಳಂಬಕ್ಕೆ ಕಾರಣವಾದ ಸಮಸ್ಯೆ ತಕ್ಷಣ ನಿವಾರಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ರೈತರಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಯಾಗುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.