ಸಮಾಜಮುಖಿ ಸಂಶೋಧನೆ ವಿರಳ

ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಉದ್ಘಾಟಿಸಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿವಿ ಕುಲಸಚಿವ ಪ್ರೊ.ವಿ.ಲೋಕೇಶ್, ಪ್ರೊ.ಜೆ.ತಿಪ್ಪೇರುದ್ರಪ್ಪ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪೊ.ಒ.ಮಾರೆಣ್ಣ ಇದ್ದರು.
ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಉದ್ಘಾಟಿಸಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿವಿ ಕುಲಸಚಿವ ಪ್ರೊ.ವಿ.ಲೋಕೇಶ್, ಪ್ರೊ.ಜೆ.ತಿಪ್ಪೇರುದ್ರಪ್ಪ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪೊ.ಒ.ಮಾರೆಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಭಿನ್ನ ದೃಷ್ಟಿಕೋನಗಳ ಆಲೋಚನೆಗಳು ಕುಂಠಿತ
ಬಳ್ಳಾರಿ : ಜ್ಞಾನವನ್ನು ಓರೆಗೆ ಹಚ್ಚುವ ಮತ್ತು ಸಮಾಜಮುಖಿಯಾದ ಸಂಶೋಧನೆಗಳು ಇಂದು ವಿರಳವಾಗಿವೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಅಂತರಿಕ ಗುಣಮಟ್ಟಕೋಶ ಹಾಗೂ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಸಂಶೋಧನಾ ವಿಧಾನ ಹಾಗೂ ಪ್ರಕಟಣಾ ನೀತಿ ಸಂಹಿತೆಗಳು ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು. ಇವುಗಳನ್ನು ಪುನರ್‌ಸ್ಥಾಪಿಸಲು ಅಂತರ್‌ಶಿಸ್ತೀಯ ಅಥವಾ ಬಹುಶಿಸ್ತೀಯ ಪರಿಕಲ್ಪನೆಗಳಿಂದ ಮಾತ್ರ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸ್ವಂತ ಹಾಗೂ ವಿಭಿನ್ನ ದೃಷ್ಟಿಕೋನಗಳ ಆಲೋಚನೆಗಳು ಕುಂಠಿತವಾಗಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಯೋಚನಾ ಶಕ್ತಿಯು ಭಿನ್ನವಾಗಿರುವಾಗ ಸಂಶೋಧನೆಯಲ್ಲಿ ಬಹುತೇಕ ಎಲ್ಲ ವಿಷಯಗಳ ಸಂಶೋಧನಾ ವಿಧಾನಗಳು ಹೋಲಿಕೆ ಆಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. 2013 ರಿಂದ 2023ರವರೆಗೆ ಕರ್ನಾಟಕದಲ್ಲಿ ಒಟ್ಟಾರೆ 27,000 ಪಿಎಚ್‌ಡಿ ಪದವಿಗಳು ಹೊರಬಂದಿವೆ ಎಂದು ತಿಳಿಸಿದರು.
ಪ್ರತಿ ಸಂಶೋಧಕರು ಭಾಷಾ ಪಾಂಡಿತ್ಯ, ವಿಷಯ ಜ್ಞಾನ ಹಾಗೂ ಆಧುನಿಕ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅನಕ್ಷರತೆ ಹೋಗಲಾಡಿಸಲು ಸಮಾಜಕ್ಕೆ ಕೈಗನ್ನಡಿಯಾಗಬೇಕಾದ ಗುಣಮಟ್ಟದ ಸಂಶೋಧನಾ ಗ್ರಂಥಗಳನ್ನು ಉತ್ಪಾದಿಸಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ಕರೆ ನೀಡಿದರು. ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ವಿವಿಯ ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಯು ವರ್ಷಕ್ಕೆ ಕನಿಷ್ಠ ಎರಡು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಬೇಕು. ಮುಂಬರುವ ದಿನಗಳಲ್ಲಿ ವಿವಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಒದಗಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ವಿವಿಯ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net