ಕೂಡ್ಲಿಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಪಪಂ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ವಕೀಲರ ಸಂಘದ ಸಹ ಕಾರ್ಯದರ್ಶಿ ಡಿ.ಎಚ್.ದುರುಗೇಶ್, ಪ್ರಾಚಾರ್ಯ ಷಣ್ಮುಖನಗೌಡ ಸಂಕಾಳ್, ಪ್ರಾಧ್ಯಾಪಕರಾದ ಜಿ.ಗುರುಬಸವರಾಜ, ಟಿ.ಓಂಕಾರಪ್ಪ, ಡಾ.ಜ್ಯೋತಿ, ಡಾ.ಕಾವ್ಯಾ ಇದ್ದರು.
ಕೂಡ್ಲಿಗಿ: ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಇತ್ತೀಚಿಗೆ ಮಾತನಾಡಿದರು. ತಾಲೂಕು ಮುಂದುವರಿಯಲು ಶಿಕ್ಷಣ ಅವಶ್ಯವಾಗಿದ್ದು, ಹಲವು ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದೆ. ನಾಲ್ಕು ಕಡೆ ಪಿಯು ಕಾಲೇಜುಗಳನ್ನು ಆರಂಭಿಸಲಾಗಿದೆ. ಕೆಪಿಎಸ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಸತಿ ನಿಲಯಗಳನ್ನು ಮಂಜೂರು ಮಾಡಿಸಿರುವೆ. ಪಟ್ಟಣದ ಪದವಿ ಕಾಲೇಜಿನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹವನ್ನು ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಲಾಗುತ್ತಿದ್ದು, ಪ್ಯಾಡ್ ವ್ಯವಸ್ಥೆ ಸಹ ಮಾಡಲಾಗುವುದು ಎಂದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರತ್ಯೇಕ ಮಹಿಳಾ ಕಾಲೇಜು ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಶೀಘ್ರ ಮಹಿಳಾ ಕಾಲೇಜಿಗೆ ಮಂಜೂರಾತಿ ಸಿಗುವ ವಿಶ್ವಾಸವಿದೆ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗಾಗಿ ಐದು ಎಕರೆ ಜಮೀನು ತಾಲೂಕು ಆಡಳಿತ ನಿಗದಿಪಡಿಸಿದ್ದು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಮಂಜೂರಾಗಿದ್ದು, ಪದವಿ ಕಾಲೇಜಿನ ವಸತಿ ನಿಲಯದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು. ಪ್ರಾಚಾರ್ಯ ಷಣ್ಮುಖನಗೌಡ ಸಂಕಾಳ್, ಪ್ರಾಧ್ಯಾಪಕರಾದ ಜಿ.ಗುರುಬಸವರಾಜ, ಟಿ.ಓಂಕಾರಪ್ಪ, ಡಾ.ಜ್ಯೋತಿ, ಡಾ.ಕಾವ್ಯಾ, ಪಿ.ಉಮೇಶ್, ಬೊಮ್ಮಯ್ಯ ಇತರರಿದ್ದರು.