ಹೈದರಬಾದ್ ಕರ್ನಾಟಕ 371ಜೆ ಕಾಲಂ ಜಾರಿಗೆಗೊಳ್ಳುವ ಮುನ್ನ 2012ರಲ್ಲಿ ವಿಎಸ್‌ಕೆ ವಿವಿಯಲ್ಲಿ ನಡೆದ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದವರಿಗಿಂತ ಹೊರಗಿನವರನ್ನೇ ಭರ್ತಿ ಮಾಡಿಕೊಳ್ಳಲಾಗಿತ್ತು. ನಂತರ 2019ರ ನಡೆದ ನೇಮಕಾತಿ ವೇಳೆ ಶೇ. 100 ರಷ್ಟು ಕಲ್ಯಾಣ ಪ್ರದೇಶದವರಿಗೆ ಅದ್ಯತೆ ನೀಡಲಾಗಿದೆ. ಆದರೆ, ಸದ್ಯ ಈಗ ಹೊರಡಿಸಿರುವ ನೇಮಕಾತಿ ಸಂಬಂಧ ಕರಡು ಅಧಿಸೂಚನೆಯಲ್ಲಿ ಶೇ. 25ರಷ್ಟು ಉಳಿಕೆ ವೃಂದಕ್ಕೆ ಮೀಸಲಾತಿ ನೀಡಲು ಸರ್ಕಾರದಿಂದ ಯಾವ ಸುತ್ತೊಲೆ ಹೊರಡಿಸಿದೆ ಬಹಿರಂಗಪಡಿಸಿಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಅಲ್ಲದೆ, ಈಗಾಗಲೆ ವಿವಿಯ ಸೇವೆಯಲ್ಲಿರುವ ಹಲವು ಪ್ರಾಧ್ಯಾಪಕರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೊರತು ಪಡಿಸಿದವರು ಹೆಚ್ಚಿದ್ದು, ಉಳಿಕೆ ವೃಂದದ ಕೋಟಾ ಪೂರ್ಣಗೊಂಡಿದೆ. ಹೈದರಬಾದ್ ಕರ್ನಾಟಕ ಮೀಸಲಾತಿ ಜಾರಿಗೊಳ್ಳುವ ಮುನ್ನವೇ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ನಾನಾ ಜಿಲ್ಲೆಗಳ ವಿವಿಗಳಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಯವರು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲ ಜಿಲ್ಲೆಗಳ ವಿವಿಗಳಲ್ಲಿ ಹೊಸದಾಗಿ ನೇಮಕಾತಿ ಅಧಿಸೂಚನೆಯಲ್ಲಿ ವಾಸ ಸ್ಥಳ ಆಧಾರದ ಮೇಲೆ ಹೈದರಬಾದ್ ಕರ್ನಾಟಕ ಕೋಟಾ ಪೂರ್ಣ ಎಂಬುದಾಗಿ ನೇಮಕಾತಿ ಅಧಿಸೂಚನೆ ಹೊರಡಿಸುತ್ತಾರೆ. ಆದರೆ, ಈ ಭಾಗದ ಹಿಂದುಳಿದ ಪ್ರದೇಶ ಹಾಗೂ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬ ಆಧಾರದಿಂದ ಪ್ರತ್ಯೇಕ ಹೈದರಬಾದ್ ಕರ್ನಾಟಕ 371ಜೆ ಕಾಲಂ ಮೀಸಲಾತಿ ಜಾರಿ ಮಾಡಿದೆ. ನೇಮಕಾತಿಯಲ್ಲಿ ಬೇರೆಯುವರಿಗೆ ಮೀಸಲಾತಿ ನೀಡುವುದರಿಂದ ಸ್ಥಳೀಯರ ಅನ್ಯಾಯವಾಗಲಿದೆ. ಈಚೆಗೆ ರಾಯಚೂರು ವಿವಿಯಲ್ಲಿಯೂ ಹುದ್ದೆಗಳ ಮೀಸಲಾತಿಯಲ್ಲಿಯೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶೇ.75 ಹಾಗೂ ಉಳಿದಂತೆ ಶೇ. 25ರಷ್ಟು ಎಂಬುದಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಸಾಮಾಜಿಕ ಹೋರಾಟಗಾರರು ಅಕ್ಷೇಪಣೆ ಸಲ್ಲಿಸಿದ್ದರಿಂದ ಶೇ. 100ರಷ್ಟು ಸ್ಥಳೀಯರಿಗೆ ಅದ್ಯತೆ ನೀಡಲಾಯಿತು. ಅದರಂತೆ, ಈಗಾಗಲೇ ವಿಎಸ್‌ಕೆ ವಿವಿಯಿಂದ ಅಧಿಸೂಚನೆ ಹೊರಡಿಸಿ ಐದು ದಿನಗಳು ಕಳೆದಿದ್ದು, ಅಕ್ಷೇಪಣೆ ಸಲ್ಲಿಸಲು ಹತ್ತು ದಿನಗಳು ಮಾತ್ರ ಉಳಿದಿವೆ. ಯಾರು ಅಕ್ಷೇಪಣೆ ಸಲ್ಲಿಸದಿದ್ದರೆ ಕೆಲ ಹುದ್ದೆಗಳ ಕಲ್ಯಾಣ ಕರ್ನಾಟಕ ಪ್ರದೇಶ ಅಲ್ಲದವರಿಗೆ ದೊರೆಯಲಿವೆ ಎಂಬುದಾಗಿ ವಿಎಸ್‌ಕೆ ವಿವಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.