ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘಟನೆ ಪದಾಧಿಕಾರಿಗಳಾದ ಡಾ.ಪ್ರಮೋದ್, ಮಂಜುಳಾ, ಎ.ದೇವದಾಸ್, ಗೋವಿಂದ್, ಈಶ್ವರಿ, ನರಸಣ್ಣ, ಪಂಪಾಪತಿ ಇತರರಿದ್ದರು.
ಬಳ್ಳಾರಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ, ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಸೋಷಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ (ಎಸ್‌ಐಸಿಐಸಿ) ಸಂಘಟನೆಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯ ಸಮಿತಿ ಸದಸ್ಯೆ ಡಿ. ನಾಗಲಕ್ಷ್ಮೀ ಮಾತನಾಡಿ, ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕಾ ಬೆಂಬಲಿತ ಇಸ್ರೇಲ್ ಹಾಗೂ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ನೆಪವನ್ನಾಗಿ ಮಾಡಿಕೊಂಡು ಕೇಂದ್ರ ಸರ್ಕಾರ ಬೆಲೆ ಏರಿಕೆ ಸಮರ್ಥಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಅವಕಾಶವನ್ನು ಅಮೆರಿಕಾದ ಒತ್ತಡಕ್ಕೆ ಮಣಿದು ಕೈಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆಗಳೇ ಅರ್ಧದಷ್ಟಿವೆ. ಆದ್ದರಿಂದ, ಸರ್ಕಾರಗಳು ಕೂಡಲೇ ತೆರಿಗೆ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯ ಆರ್. ಸೋಮಶೇಖರ ಗೌಡ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯಾಗಿದ್ದರೂ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಬದಲಾಗಿ ನಿರಂತರ ಬೆಲೆ ಏರಿಕೆ ಮಾಡಲಾಗುತ್ತಿದೆ. ತೈಲ ಕಂಪನಿಗಳು ಲಕ್ಷಾಂತರ ಕೋಟಿ ರೂ. ಲಾಭ ಮಾಡಿಕೊಳ್ಳುತ್ತಿವೆ ಎಂದು ದೂರಿದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ಅನುಸರಿಸುತ್ತಿವೆ. ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ತೀವ್ರಗೊಳಿಸಬೇಕಿದೆ ಎಂದರು.