ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿ

ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ  ಡಿಸಿ ನಾಗೇಂದ್ರ ಪ್ರಸಾದ್ .ಕೆ, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಎಡಿಸಿ ಮಹಮ್ಮದ್ ಎನ್.ಜುಬೇರ್, ಕೃಷಿ ಇಲಾಖೆ ಉಪನಿರ್ದೇಶಕ ಕೆ.ಸೋಮಸುಂದರ್, ಎಸಿ ಎಚ್.ಡಿ.ರಾಜೇಶ್ ಇತರರಿದ್ದರು.
ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಡಿಸಿ ನಾಗೇಂದ್ರ ಪ್ರಸಾದ್ .ಕೆ, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಎಡಿಸಿ ಮಹಮ್ಮದ್ ಎನ್.ಜುಬೇರ್, ಕೃಷಿ ಇಲಾಖೆ ಉಪನಿರ್ದೇಶಕ ಕೆ.ಸೋಮಸುಂದರ್, ಎಸಿ ಎಚ್.ಡಿ.ರಾಜೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆಗಳನ್ನು ತಾಲೂಕುವಾರು ಗುರುತಿಸಿ
  • ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು
ಬಳ್ಳಾರಿ : ಜಿಲ್ಲೆಯಲ್ಲಿ ಮಳೆಯಿಂದ ಎದುರಾಗುವ ಅನಾಹುತ ಹಾಗೂ ಸಾರ್ವಜನಿಕರಿಗೆ ಕುಡಿವ ನೀರಿನ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್ .ಕೆ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಪೂರ್ವಸಿದ್ಧತೆ ಹಾಗೂ ಕುಡಿವ ನೀರು ಪೂರೈಕೆ ಕುರಿತು ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ಮುಂದಿನ ಒಂದು ವಾರದವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಬೇಕು ಎಂದರು.
ನಗರದ ಪ್ರಮುಖ ಚರಂಡಿ, ನಾಲಾ ಮತ್ತು ನೀರು ಹರಿಯುವ ಮಾರ್ಗಗಳ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲು ಸ್ಥಳೀಯ ಸಂಸ್ಥೆ ಹಾಗೂ ನೀರಾವರಿ ಇಲಾಖೆ ಮುಂದಾಗಬೇಕು. ಮಳೆಗೆ ಕುಸಿಯಬಹುದಾದ ಹಳೆಯ ಹಾಗೂ ಅಪಾಯಕಾರಿ ಮನೆಗಳನ್ನು ತಾಲೂಕುವಾರು ಗುರುತಿಸಿ, ಅಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಬೇಕು. ನದಿ ಪಾತ್ರದ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಬೇಕು. ಅದರಂತೆ ಶಿಥಿಲಗೊಂಡ ಹಳೆಯ ಕಟ್ಟಡಗಳ ಶಾಲೆಗಳ ಗೋಡೆ, ಅಂಗನವಾಡಿ ಕೇಂದ್ರಗಳಿದ್ದಲ್ಲಿ ಅಂತಹವುಗಳನ್ನು ಗುರುತಿಸಿ ಕೂಡಲೇ ಸ್ಥಳಾಂತರಿಸಬೇಕು ಎಂದರು.
ತಾಲೂಕು ಕಚೇರಿಗಳ ತಂಡಗಳಿಂದ ಹಾನಿಗೊಳಗಾದ ಮನೆಗಳ ಜಂಟಿ ಸಮೀಕ್ಷೆ ನಡೆಸಿ, ಪೂರ್ಣ, ತೀವ್ರ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಬಾಕಿ ಇರುವ ಪರಿಹಾರ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಬಿರುಗಾಳಿ-ಮಳೆಗೆ ಹಾನಿಗೊಳಗಾದ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್‌ಗಳನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಯಾವುದೇ ವಿಪತ್ತಿನ ಸಂದರ್ಭದಲ್ಲಿ 6 ರಿಂದ 12 ಗಂಟೆಯಲ್ಲಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಬೇಕು. ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗುವ ಹಳೆಯ ಮರ- ಕೊಂಬೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡು ಕೊರತೆಯಾಗದಂತೆ ವಿತರಿಸಬೇಕು. ನಿರಂತರ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ನಿಯಮಿತವಾಗಿ ಫಾಂಗಿಂಗ್ ಕಾರ್ಯ ಕೈಗೊಳ್ಳಬೇಕು ಎಂದರು.
ಯಾವುದೇ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರರು ಸತತ ಸಂಪರ್ಕದಲ್ಲಿದ್ದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net