ನಿಗದಿತ ವೇಳೆಗೆ ಬಾರದ ಅಧಿಕಾರಿಗಳು

ಬಳ್ಳಾರಿಯ ನೂತನ ಡಿಸಿ ಭವನದಲ್ಲಿನ ಆಹಾರ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳಿಲ್ಲದೆ ಕುರ್ಚಿಗಳು ಖಾಲಿಯಿದ್ದವು.
ಬಳ್ಳಾರಿಯ ನೂತನ ಡಿಸಿ ಭವನದಲ್ಲಿನ ಆಹಾರ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳಿಲ್ಲದೆ ಕುರ್ಚಿಗಳು ಖಾಲಿಯಿದ್ದವು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ
ಬಳ್ಳಾರಿ ; ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಏ.1ರಿಂದ ಜೂ.1ರವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾಯಿಸಿ ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಸಮಯ ನಿಗದಿ ಮಾಡಿ ಜಾರಿ ಮಾಡಿ ಸರ್ಕಾರ ಆದೇಶಿಸಿದೆ.
ಹೊಸ ಅದೇಶದ ಅನ್ವಯ ಬುಧವಾರ ಬೆಳಗ್ಗೆ ಎಂಟು ಗಂಟೆಯಿಂದಲೇ ಸರ್ಕಾರಿ ಕಚೇರಿ ಆರಂಭವಾಗಿದ್ದರೂ ನಗರದ ಜಿಲ್ಲಾಡಳಿತದ ಭವನದ ಬಹುತೇಕ ಕಚೇರಿಗಳಲ್ಲಿ ಮಾತ್ರ ಸಮಯ 9.30 ಕಳೆದರೂ ಅಧಿಕಾರಿಗಳು ಪತ್ತೆ ಇರಲಿಲ್ಲ.
ಇಲ್ಲಿನ ಹಳೆಯ ಡಿಸಿ ಕಚೇರಿಯಲ್ಲಿನ ಸಹಾಯಕ ಆಯುಕ್ತ (ಎಸಿ), ಅಪರ ಜಿಲ್ಲಾಧಿಕಾರಿ (ಎಡಿಸಿ), ಡಿಡಿಎಲ್ಆರ್ ಹಾಗೂ ಸ್ಪಂದನ ಸೇರಿದಂತೆ ನಾನಾ ಕಚೇರಿಗಳಲ್ಲಿ ಕೇವಲ ಡಿ-ಗ್ರೂಪ್ ಸಿಬ್ಬಂದಿಯೂ ನಿಗದಿತ ವೇಳೆಗೆ ಮಾತ್ರ ಹಾಜರಿದ್ದರು. ಯಾವೊಬ್ಬ ಉನ್ನತ ಅಧಿಕಾರಿಯೂ ಸಮಯಕ್ಕೆ ಆಸೀನರಾಗಿರಲಿಲ್ಲ. ಅದರಂತೆ ಹೊಸ ಡಿಸಿ ಕಚೇರಿ ಭವನದಲ್ಲಿನ ಆಹಾರ ಇಲಾಖೆ, ಪಿಂಚಣಿ ಶಾಖೆ, ಧಾರ್ಮಿಕ ದತ್ತಿ ಇಲಾಖೆ, ಡಿಡಿಪಿಯು, ಡಿಡಿಪಿಐ ಹಾಗೂ ಅಬಕಾರಿ ಇಲಾಖೆಗಳ ಬಾಗಿಲು ತೆರೆದಿದ್ದರೂ, ಅಧಿಕಾರಿಗಳ ಕುರ್ಚಿಗಳು ಮಾತ್ರ ಖಾಲಿ ಇದ್ದವು.
ಬೆಳಿಗ್ಗೆ ಎಂಟು ಗಂಟೆಗೆ ಅಧಿಕಾರಿಗಳು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ದೂರದ ಊರುಗಳಿಂದ ನಾನಾ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರು ಕಾಯುವಂತಾಯಿತು. ಬೆಳಗ್ಗೆ 9.30 ಕಳೆದರೂ ಅಧಿಕಾರಿಗಳು ಒಬ್ಬೊಬ್ಬರಾಗಿ ನಿಧಾನವಾಗಿ ಕಚೇರಿಗೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಬೆಳಗ್ಗೆ ತಡವಾಗಿ ಬಂದ ಅಧಿಕಾರಿಗಳು, ಹೋಗುವಾಗ ಮಾತ್ರ ಸಮಯ ಪಾಲನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರು. ಮಧ್ಯಾಹ್ನ 1:30 ಆಗುತ್ತಿದ್ದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಕಚೇರಿಯಿಂದ ಕಾಲ್ಕಿತ್ತರು. ಅತ್ತ ಜಿಪಂ ಹಾಗೂ ತಾಪಂ ಕಚೇರಿಗಳಲ್ಲೂ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿತ್ತು. ಬಿಸಿಲು ಹೆಚ್ಚಾಗುವ ಮೊದಲೇ ಕೆಲಸ ಮುಗಿಸಿಕೊಂಡು ಹೋಗೋಣವೆಂದು ಬೆಳಗ್ಗೆಯೇ ಬಂದಿದ್ದೇವೆ. ಆದರೆ ಅಧಿಕಾರಿಗಳಿಲ್ಲದೆ ಇಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ, ಎಂದು ಸಾರ್ವಜನಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net