ವಿಜಯವಾಣಿ ಸುದ್ದಿಜಾಲ ಹರಪನಹಳ್ಳಿ
ಅರಸೀಕೆರೆ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆಗೆ ಗ್ರಾಮದ ಮುಖ್ಯ ರಸ್ತೆಯನ್ನೇ ಮಾರುಕಟ್ಟೆ ಮಾಡಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
ವ್ಯಾಪಾರಕ್ಕಾಗಿ ಅಕ್ಕ-ಪಕ್ಕದ ಹತ್ತಾರು ಗ್ರಾಮಗಳ ಸಾವಿರಾರು ಜನರು ಸಂತೆಗೆ ಬರುತ್ತಾರೆ. ಸಂತೆ ನಡೆಯುವ ರಸ್ತೆಯೇ ಗ್ರಾಮದ ಪ್ರಮುಖ ರಸ್ತೆಯಾಗಿದ್ದರಿಂದ ಎಲ್ಲ್ಲ ವಾಹನಗಳು ಇದೇ ಮಾರ್ಗವಾಗಿ ಸಂಚರಿಸಬೇಕು. ಆದರೆ, ರಸ್ತೆಯಲ್ಲಿ ತರಕಾರಿ ಅಂಗಡಿಗಳು, ಮಾರುಕಟ್ಟೆಗೆ ಬರುವ ಜನರ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಒಡಾಟಕ್ಕೆ ರಸ್ತೆಯೇ ಕಾಣದಂತ್ತಾಗಿದೆ. ವ್ಯಾಪಾರ ಮಾಡಿ ಸಂತೆ ಮುಗಿದ ನಂತರ ತ್ಯಾಜ್ಯವನ್ನು ರಸ್ತೆಯಲ್ಲಿಯೇ ಬಿಡಲಾಗುತ್ತಿದೆ. ಮಾರುಕಟ್ಟೆ ನಡೆಯುವ ಸ್ಥಳದ ಎದುರು ಕೋಲಶಾಂತೇಶ್ವರ ಮಠದ ಶಾಲಾ-ಕಾಲೇಜು, ಕೃಷಿ ಕಚೇರಿ, ಗ್ರಂಥಾಲಯ, ಅಂಗನವಾಡಿ, ಪಶು ಆಸ್ಪತ್ರೆ, ಹಾಲಿನ ಡೈರಿಗಳು ಅಕ್ಕಪಕ್ಕದಲ್ಲಿರುವುದರಿಂದ ಗ್ರಾಮಸ್ಥರಿಗೆ ಕಚೇರಿ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ.
ಅರಸೀಕೆರೆ ರಸ್ತೆ ವಿಸ್ತರಣೆ ನಡೆದರೂ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಗೆ ಸೂಕ್ತ ಸ್ಥಳವಿಲ್ಲ. ರಸ್ತೆಯಲ್ಲಿ ವ್ಯಾಪಾರ ಮಾಡುವ ಮಾರಾಟಗಾರರಿಂದ ನಿಗದಿಗಿಂತಲೂ ಹೆಚ್ಚು ಹಣ ಪಡೆಯುತ್ತಾರೆ ಎಂಬ ದೂರುಗಳಿವೆ. ಗ್ರಾಪಂ ಕರ ವಸೂಲಾತಿ ಮಾಡುವುದು ಬಿಟ್ಟರೆ, ಸಂತೆಯಲ್ಲಿ ಮಾರಾಟಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಯಾವುದೇ ಸೌಕರ್ಯ ನೀಡುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೋಲಶಾಂತೇಶ್ವರ ಮಠದ ಸಮೀಪದ ಬಳಿ ಎರಡು ವರ್ಷಗಳ ಹಿಂದೆಯೇ ದಿನವಹಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಮಾರಾಟಗಾರರು ವ್ಯಾಪಾರ ಚನ್ನಾಗಿ ಆಗಬೇಕೆನ್ನುವ ಉದ್ದೇಶದಿಂದ ರಸ್ತೆ ಮೇಲೆ ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ಸೂಕ್ತ ಕ್ರಮ ವಹಿಸಲಾಗುವುದು. ಮಾರುತೇಶ್ ಅರಸೀಕೆರೆ ಪಿಡಿಒ