ಬಳ್ಳಾರಿ : ಕೇಂದ್ರ ಸರ್ಕಾರ ಸ್ವಾಮ್ಯದ ಚಿಕ್ಕಮಂಗಳೂರಿನ ಕುದುರೆಮುಖ (ಕೆಐಒಸಿಎಲ್) ಹಾಗೂ ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಸ್ಟೀಲ್ಸ್ ಕಂಪನಿ(ವಿಎಸ್‌ಎಲ್) ಕಂಪನಿಗಳಿಗೆ ಎನ್‌ಎಂಡಿಸಿ ಹಾಗೂ ಕೆಐಒಎಂ ಗಣಿಗಳಿಂದ ಅದಿರು ಪಡೆದು, ಸಂಡೂರಿನ ದಟ್ಟ ಅರಣ್ಯ ಉಳಿಸಲಿ ಎಂದು ಜನಸಂಗ್ರಾಮ್ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಆಲದಹಳ್ಳಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗಣಿ ಬಾಧಿತ ಪ್ರದೇಶದ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾಲಿ ಗಣಿ ಗುತ್ತಿಗೆ ಪ್ರಸ್ತಾವನೆಯಲ್ಲಿ ಕೆಐಒಸಿಎಲ್ ಕಂಪನಿಗೆ 2ಎಂಟಿಪಿಎ ಹಾಗೂ ವಿಐಎಸ್‌ಎಲ್ ಕಂಪನಿ 0.9 ಎಂಟಿಪಿಎ ಅದಿರು ಉತ್ಪಾದನೆಗೆ ಬೇಡಿಕೆ ಇಟ್ಟಿವೆ. ಈಗಾಗಲೇ ಕಚ್ಛಾ ಅದಿರು ಕೊರತೆಯಿಂದ ಪೀಡಿತಗೊಂಡಿರುವ ಎರಡು ಕಂಪನಿಗಳಿಗೆ ಕೇಂದ್ರದ ಎನ್‌ಎಂಡಿಸಿ ಹಾಗೂ ಕೆಐಒಎಂ ಗಣಿಗಳಿಂದ ವಾರ್ಷಿಕವಾಗಿ 15.6 ಎಂಟಿಪಿಎ ಅದಿರು ಉತ್ಪಾದನೆಯಾಗುತ್ತಿದೆ. ಇದರ ಶೇ. 20ರಷ್ಟು (3.12 ಎಂಟಿಪಿಎ) ಅದಿರು ಬಳಕೆ ಮಾಡಿಕೊಂಡರೆ ಮುಚ್ಚುವ ಹಂತದಲ್ಲಿರುವ ಎರಡು ಕಾರ್ಖಾನೆಗಳು ಪುನಶ್ಚೇತನಗೊಳ್ಳಲಿದೆ. ಜತೆಗೆ ಗಣಿಗುತ್ತಿಗಾಗಿ ಹೂಡುವ ಬಂಡವಾಳ ವೆಚ್ಚವೂ ಉಳಿಯಲಿದೆ. ಜತೆಯಲ್ಲಿ ಪರಿಸರ ಸಂರಕ್ಷಣೆ, ಮುಂದಿನ ಪೀಳಿಗೆಗೆ ಖನಿಜ ಸಂಪತ್ತರು ಸಂರಕ್ಷಿಸಿದಂತೆಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಾರ್ಖಾನೆ ಆರಂಭಿಸುವುದಾಗಿ ಕುಡುತಿನಿ ಬಳಿ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಈವರೆಗೂ ಕಾರ್ಖಾನೆ ಆರಂಭಿಸಿಲ್ಲ. ಕೂಡಲೇ ಕಬ್ಬಿಣ ಕಾರ್ಖಾನೆ ಆರಂಭಿಸುವುದರಿಂದ ಸ್ಥಳೀಯರಿಗೆ ಉದ್ಯೋಗ ಹಾಗೂ ಸಂಡೂರಿನಲ್ಲಿರುವ ಉತ್ಕೃಷ್ಠ ಅದಿರು ಸಾರ್ವಜನಿಕ ಉದ್ದಿಮೆಗೆ ಸದ್ಬಳಕೆಯಾಗಲಿದೆ ಎಂದರು.
ಸಂಘಟನೆ ಪದಾಧಿಕಾರಿಗಳಾದ ಟಿ.ಎಂ.ಶಿವಕುಮಾರ್, ಉಗ್ರನರಸಿಂಹೇಗೌಡ, ಸೋಮಶೇಖರಗೌಡ, ಎಂ.ಎಲ್.ಕೆ. ನಾಯ್ಡು, ಈರಣ್ಣ ಮೂಲಿಮನಿ, ಕೆ.ಬಿ.ಮೌನೇಶ್ ಇದ್ದರು.