ಬಳ್ಳಾರಿ : ರೈತನ ಭೂಮಿ, ನೀರು, ಬೀಜ ಹಾಗೂ ಸ್ವಾಭಿಮಾನದ ರಕ್ಷಣೆಗೆ ನಮ್ಮ ಹೋರಾಟವನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಪ್ರತಿಪಾದಿಸಿದರು. ನಗರದಲ್ಲಿ ಬಿಡಿಎಎ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಯೋಜಿಸಿದ್ದ ‘ರೈತ ಹುತಾತ್ಮ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1980ರ ಜು.21ರಂದು ಬೆಟರ್‌ಮೆಂಟ್ ಲೆವಿ ಕಾಯ್ದೆ ವಿರುದ್ಧ ಧ್ವನಿಯೆತ್ತಿದ ರೈತರ ಮೇಲೆ ಸರ್ಕಾರ ನಡೆಸಿದ ಬಲಪ್ರಯೋಗ ಮತ್ತು ಗೋಲಿಬಾರ್ ಅಮಾನವೀಯ. ನರಗುಂದ - ನವಲಗುಂದ ರೈತ ಬಂಡಾಯದ ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಅಂದು ಹರಿದ ರೈತರ ನೆತ್ತರು ಕೃಷಿ ಚಳುವಳಿಗೆ ಹೊಸ ಶಕ್ತಿ ನೀಡಿದೆ ಎಂದರು.
ಸಂಘದ ಗೌರವಾಧ್ಯಕ್ಷ ಸ.ರಘುನಾಥ ಮಾತನಾಡಿ, ಕೃಷಿ ಭೂಮಿಯನ್ನು ವಾಣಿಜ್ಯ ಯೋಜನೆಗಳು ಹಾಗೂ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ವಶಪಡಿಸಿಕೊಳ್ಳಲಾಗುತ್ತಿದೆ. ಕೃಷಿ ಮತ್ತು ನಿಸರ್ಗ ಕಂಪನಿಗಳ ಸರಕಲ್ಲ. ನಮ್ಮ ಹೋರಾಟ ಪ್ರಪಂಚ ಬ್ಯಾಂಕ್ ನೀತಿಗಳು ಹಾಗೂ ಕೃಷಿಯನ್ನು ಧ್ವಂಸಗೊಳಿಸುವ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧವಾಗಿದೆ ಎಂದು ನುಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಂಘದ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಮಾತನಾಡಿ, ಅಕ್ರಮ ಗಣಿಗಾರಿಕೆಯ ಹಣವನ್ನು ಕೃಷಿ, ನೀರಾವರಿ ಹಾಗೂ ಶಿಕ್ಷಣಕ್ಕೆ ಬಳಸಬೇಕು. ಜಿಲ್ಲೆಯಲ್ಲಿ ಕೈಗಾರಿಕೆ ಹೆಸರಿನಲ್ಲಿ 35 ಸಾವಿರ ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ‘ಲ್ಯಾಂಡ್ ಬ್ಯಾಂಕ್’ ಮಾಡಿರುವುದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.
ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಬಂಡವಾಳಶಾಹಿಗಳಿಗೆ ಸಿಗುವ ಸಾಲ ರೈತರಿಗೆ ಸಿಗದೆ, ಅವರು ಖಾಸಗಿ ಲೇವಾದೇವಿಗಾರರ ಬಲೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಸರ್ಕಾರದ ಕೃಷಿ ನೀತಿಯ ವೈಫಲ್ಯ ಎಂದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು : ತಾಲೂಕಿನ ಹಗರಿ ಬಳಿ ವೇದಾವತಿ ನದಿಗೆ ಅಂತರ್ಜಲ ಆಣೆಕಟ್ಟು ನಿರ್ಮಿಸಿ, 72 ಹಳ್ಳಿಗಳ 80,419 ಎಕರೆಗೆ ನೀರಾವರಿ ಹಾಗೂ 2.07 ಲಕ್ಷ ಜನರಿಗೆ ತುರ್ತಾಗಿ ಕುಡಿಯುವ ನೀರು ಪೂರೈಸಬೇಕು. ಸಕಾಲದಲ್ಲಿ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಔಷಧ ಪೂರೈಸಬೇಕು. ಕೃಷಿಗೆ 24 ಗಂಟೆಗಳ ಕಾಲ ನಿರಂತರ ಉಚಿತ ವಿದ್ಯುತ್ ಮತ್ತು ಸಮರ್ಪಕ ನೀರಾವರಿ ಕಲ್ಪಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಪರಿಣಾಮಕಾರಿ ಕೃಷಿ ನೀತಿ ರೂಪಿಸಬೇಕು. ಫಲವತ್ತಾದ ಕೃಷಿ ಭೂಮಿ ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳಬಾರದು ಹಾಗೂ ಕಾರ್ಪೊರೇಟ್ ಗಣಿಗಾರಿಕೆ ದಾಳಿಯಿಂದ ರಕ್ಷಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಶಾಂತ್ ಖೇಣಿ ಅವರು ‘ತುಂಗಭದ್ರ ಜಲಾಶಯದ ಇತಿಹಾಸ’ ಕುರಿತ ಸಾಕ್ಷೃಚಿತ್ರ ಪ್ರದರ್ಶಿಸಿದರು.