ಚೆಕ್‌ಪೋಸ್ಟ್‌ಗಳ ದುರಸ್ತಿಗೆ ನಿರ್ಲಕ್ಷೃ

ಸಂಡೂರು ತಾಲೂಕಿನ ಬನ್ನಿಹಟ್ಟಿ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಲಾರಿಗಳು ಸಾಲು ನಿಂತಿರುವುದು.
ಸಂಡೂರು ತಾಲೂಕಿನ ಬನ್ನಿಹಟ್ಟಿ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಲಾರಿಗಳು ಸಾಲು ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬನ್ನಿಹಟ್ಟಿ ಬಳಿ ನಾಲ್ಕರ ಪೈಕಿ ಒಂದು ಕಾರ್ಯನಿರ್ವಹಣೆ
  • ಕ್ರಮಕ್ಕೆ ಹಿಂದೇಟು
ಸಂಡೂರು : ತಾಲೂಕಿನ ಬನ್ನಿಹಟ್ಟಿ ಬಳಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದ ಮೂರು ಚೆಕ್‌ಪೋಸ್ಟ್‌ಗಳಲ್ಲಿ ತೂಕದ ಯಂತ್ರಗಳು ಹಾಳಾಗಿ 4ರಿಂದ 5 ತಿಂಗಳಾಗಿದ್ದರೂ ದುರಸ್ತಿಗೆ ಕ್ರಮ ವಹಿಸಿಲ್ಲ. ಆದ್ದರಿಂದ ಲಾರಿಗಳ ತೂಕ ಸಮರ್ಪಕವಾಗಿ ನಡೆಯುತ್ತಿಲ್ಲ.
ಗಣಿಗಳಿಂದ ಅದಿರು ಸಾಗಿಸುವ ಸುಮಾರು 1500 ಲಾರಿಗಳು ನಿತ್ಯ ಈ ಚೆಕ್‌ಪೋಸ್ಟ್‌ಗಳ ಮೂಲಕ ಸಂಚರಿಸುತ್ತವೆ. ಗಣಿ ಪ್ರದೇಶದಲ್ಲಿ ಲಾರಿಗಳ ತೂಕವಾದ ನಂತರ ಬನ್ನಿಹಟ್ಟಿ ಚೆಕ್‌ಪೋಸ್ಟ್‌ನಲ್ಲಿ ಲಾರಿಗಳ ನಂಬರ್ ನಮೂದಿಸಿ ಮತ್ತೊಮ್ಮೆ ತೂಕ ಮಾಡಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟ ಅನುಮತಿ ಪತ್ರ ಹಾಗೂ ಅದಿರನ್ನು ಎಲ್ಲಿಂದ ಯಾವ ಕಾರ್ಖಾನೆಗೆ ಸಾಗಿಸಲಾಗುತ್ತದೆ ಎಂಬ ಮಾಹಿತಿ ನಮೂದಿಸಲಾಗುತ್ತದೆ.
ತೂಕ ನಿರ್ವಹಣಾ ವಿಭಾಗದವರು ದುರಸ್ತಿಗೆ ಅನುಮತಿ ನೀಡಬೇಕು. ಆಮೇಲೆ ಇಂಡಿಕೇಟರ್ ಆನ್ ಮಾಡಬೇಕು. ಸಂಚಾರ ಸಿಕ್ಕು ಆದರೆ, ಮ್ಯಾನುವೆಲ್ ಎಂಟ್ರಿ ಮಾಡಿ ಸೀಲ್ ಹಾಕಿ ಲಾರಿಗಳನ್ನು ಬಿಡಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂಬುದು ಕೆಲಸಗಾರರು ನೀಡುವ ಮಾಹಿತಿಯಾಗಿದೆ. ಇದರಿಂದಾಗಿ ಈ ಚೆಕ್‌ಪೋಸ್ಟ್‌ಗಳ ಮೂಲಕ ನಿತ್ಯ ಸಂಚರಿಸುವ ಲಾರಿಗಳ ಪೈಕಿ ಶೇ.60-70 ಲಾರಿಗಳು ಮ್ಯಾನುವೆಲ್ ಆಗಿ ಸೀಲ್ ಪಡೆದು ಹೋಗುತ್ತಿವೆ.
ಬನ್ನಿಹಟ್ಟಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ್ದ ಸಂಸದ ಈ.ತುಕಾರಾಮ್ ಮಾಹಿತಿ ಪರಿಶೀಲಿಸಿದರು.

ವ್ಯವಸ್ಥೆ ವಿರುದ್ಧ ಸಂಸದ ಆಕ್ರೋಶ

ಮರಂ ಗಣಿಗಾರಿಕೆಗೆ ಸಂಬಂಧಿಸಿದಂತೆ ಯರ‌್ರಯ್ಯನಹಳ್ಳಿ ಬಂದು ಹೋಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ದ್ವಿತೀಯಾ ಸಂಸದ ಬಂದು ಲಾರಿಗಳನ್ನು ತಡೆದು ಎರಡು ತಾಸು ಕಳೆದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂಸದ ಈ.ತುಕಾರಾಮ್ ಅಸಮಾಧಾನ ವ್ಯಕ್ತಪಡಿಸಿದರು. ಕಾಯಂ ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ 2013ರಿಂದ ಇಲ್ಲಿವರೆಗೆ ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ ಎಂದು ಸಂಸದ ತಿಳಿಸಿದರು.

ಎಲ್ಲ ಹೊರಗುತ್ತಿಗೆ ನೌಕರರು

ಚೆಕ್‌ಪೋಸ್ಟ ಅಟೆಂಡರ್ ರವಿಕೀರ್ತಿ ಮಾತ್ರ ಕಾಯಂ ಉದ್ಯೋಗಿಯಾಗಿದ್ದು, ಉಳಿದವರೆಲ್ಲ ಹೊರಗುತ್ತಿಗೆ ನೌಕರರಾಗಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಗೃಹರಕ್ಷಕ ಸಿಬ್ಬಂದಿಯನ್ನು ತಮಿಳುನಾಡು ಚುನಾವಣೆಗೆ ನಿಯೋಜಿಸಲಾಗಿದೆ. ಅದಿರು ತುಂಬಿದ ಲಾರಿಗಳು ನುಮತಿ ಪಡೆಯದೆ ಹಾಗೆಯೇ ಚೆಕ್‌ಪೋಸ್ಟ್‌ನಿಂದ ಹೋಗುತ್ತವೆ ಎಂಬುದು ಸ್ಥಳೀಯರ ಮಾಹಿತಿಯಾಗಿದೆ. ಚೆಕ್‌ಪೋಸ್ಟ್ ನಲ್ಲಿನ ಸ್ಥಿತಿಗತಿ ಬಗ್ಗೆ ಭೂವಿಜ್ಞಾನಿಗಳಾದ ಸಾದಿಕ್, ಭರತ್ ಮತ್ತು ಉಪನಿರ್ದೇಶಕರ ಗಮನಕ್ಕೆ ತಂದಿರುವುದಾಗಿ ಸಿಬ್ಬಂದಿ ತಿಳಿಸಿದರು.
"

ಬನ್ನಿಹಟ್ಟಿಯ ಮೂರು ಚೆಕ್‌ಪೋಸ್ಟ್‌ನಲ್ಲಿ ತಾಂತ್ರಿಕ ಸಮಸ್ಯೆ ಇದ್ದರೂ ಲಾರಿಗಳನ್ನು ತೂಕದ ಸಮೇತ ಚೆಕ್ ಮಾಡಿ ಕಳಿಸ ಲಾಗುತ್ತದೆ. ಜಿಲ್ಲಾಧಿಕಾರಿ ಹಾಗೂ ಇಲಾಖೆ ಮೇಲಧಿಕಾರಿ ಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಕಾಯಂ ನೌಕರರನ್ನು ನೇಮಿಸಿಕೊಳ್ಳಿ ಎಂದು ಸಂಸದರು ಹೇಳಿದ್ದಾರೆ. ಸಿಎಂ.ಸಿದ್ದರಾಮಯ್ಯ ಸಹ ಪತ್ರ ಬರೆದು ತಿಳಿಸಿದ್ದಾರೆ.

"

ಬನ್ನಿಹಟ್ಟಿ ಚೆಕ್‌ಪೋಸ್ಟ್ ಮೂಲಕ ವರ್ಷಕ್ಕೆ 1.10 ಕೋಟಿ ಮೆಟ್ರಿಕ್ ಟನ್ ಅದಿರು ಸಾಗಣೆಯಾಗುತ್ತದೆ. ಒಂದು ದಿನಕ್ಕೆ 14 ಕೋಟಿ ರೂ.ಯಂತೆ ವರ್ಷಕ್ಕೆ 6500 ಕೋಟಿ ರೂ. ಅದಿರು ವ್ಯವಹಾರ ನಡೆಯುತ್ತದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಮತ್ತು ಅರಣ್ಯ ಇಲಾಖೆ ರಿಪಬ್ಲಿಕ್ ಆಫ್ ಬಳ್ಳಾರಿ ಆಡಳಿತ ನಡೆಸುತ್ತಿವೆ. 4ರಿಂದ 5 ಲಕ್ಷ ರೂ. ಖರ್ಚು ಮಾಡಿ ತೂಕದ ಯಂತ್ರಗಳನ್ನು ದುರಸ್ತಿ ಮಾಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗುತ್ತಿಲ್ಲ. ದಿನಕ್ಕೆ ಎಷ್ಟು ಲಾರಿಗಳು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net