ಶಿಕ್ಷಕರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ

ಕುರುಗೋಡಿನಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನ, ಸಾವಿತ್ರಿಬಾಯಿ ಫುಲೆ ಜಯಂತಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಶಾಸಕ ಜೆ ಎನ್ ಗಣೇಶ್ ಉದ್ಘಾಟಿಸಿದರು.
ಕುರುಗೋಡಿನಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನ, ಸಾವಿತ್ರಿಬಾಯಿ ಫುಲೆ ಜಯಂತಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಶಾಸಕ ಜೆ ಎನ್ ಗಣೇಶ್ ಉದ್ಘಾಟಿಸಿದರು.
Published on
ಕುರುಗೋಡು: ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವುದರೊಂದಿಗೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬದ್ಧ ಎಂದು ಶಾಸಕ ಜೆ.ಎನ್.ಗಣೇಶ ಭರವಸೆ ನೀಡಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂನಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಸಾವಿತ್ರಿಬಾಯಿ ಫುಲೆ ಜಯಂತಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕರು ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಗಾಂಧಿ ತತ್ವ, ಮುರಾರ್ಜಿ ದೇಸಾಯಿ, ವೃತ್ತಿಪರ ಕಾರ್ಮಿಕರ ಮಕ್ಕಳ ಶಾಲೆ ಹಾಗೂ ಒಬಿಸಿ ಮತ್ತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಸತಿನಿಲಯ ಅಭಿವೃದ್ಧಿಗೆ 350 ಕೋಟಿ ರೂ. ನೀಡಲಾಗಿದೆ. ಎಂಟು ಕರ್ನಾಟಕ ಪಬ್ಲಿಕ್ ಶಾಲೆಗೆ ಕೆಕೆಆರ್‌ಡಿಬಿ ಅನುದಾನ ನೀಡಲಾಗಿದೆ ಎಂದರು.
ಬಿಇಒ ಸಿದ್ದಲಿಂಗಮೂರ್ತಿ ಮಾತನಾಡಿ, ಶೈಕ್ಷಣಿಕವಾಗಿ ತಾಲೂಕು ಉತ್ತಮ ಸಾಧನೆ ಮಾಡುತ್ತಿದೆ. ಇಲಾಖೆ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಶಾಸಕರ ನೆರವು ಸಿಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತಕ್ಕೆ ಸರ್ಕಾರ ಶಿಕ್ಷಕರಿಗೆ ನೀಡುವ ಅನ್ಯ ಕೆಲಸವೇ ಮೂಲ ಕಾರಣವಾಗಿದೆ. ಹೀಗಾಗಿ ನಿರುದ್ಯೋಗಿ ಯುವ ಸಮೂಹ ಬಳಸಿಕೊಂಡು ಶಿಕ್ಷಕರಿಗೆ ಹೊರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತುಕಾರಾಮ್ ಗೊರವರ, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ್ ಮಸೂತಿ ಶಿಕ್ಷಕರ ಬೇಡಿಕೆಗಳ ಕುರಿತು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಅಲ್ಲನಗರ ಗವಿಸಿದ್ದಪ್ಪ ಅವರ ‘ಮನಸಿನ ಮಾರ್ಕೆಟ್’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.
ಪುರಸಭೆ ಅಧ್ಯಕ್ಷ ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಕ್ಷೇತ್ರ ಸಮಾನ್ವಯಾಧಿಕಾರಿ ಜೆ.ಎಸ್.ಮನೋಹರ, ಪಿಎಂ ಪೋಷಣ್ ಯೋಜನೆ ಸಹಾಯಕ ನಿರ್ದೇಶಕ ಶಿವನ ನಾಯಕ್, ಮಲ್ಲಿಕಾರ್ಜುನ, ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ. ಹನುಮಂತಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪದ್ಮಾರೆಡ್ಡಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾಂತೇಶ ಮೇಟಿ, ರಾಜ್ಯಮಟ್ಟದ ಯೋಗಾಸನ ಚಿನ್ನದ ಪದಕ ಪುರಸ್ಕೃತೆ ಎಂ.ಆರ್.ವನಜಾಕ್ಷಮ್ಮ, ಶಿಕ್ಷಕಿ ಅನಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net