ಬಳ್ಳಾರಿ : ತುಂಗಭದ್ರಾ ಜಲಾಶಯದಲ್ಲಿ ದಿನೇದಿನೆ ಹೂಳು ಹೆಚ್ಚುತ್ತಿದ್ದು, ಇದೇ ಮೇ ತಿಂಗಳ ಅಂತ್ಯದಿಂದ ಹೂಳಿನ ಜಾತ್ರೆ ಆರಂಭಿಸಲಾಗುವುದು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ತುಂಗಭದ್ರಾ ರೈತ ಸಂಘದಿಂದ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ ಜಲಾಶಯಕ್ಕೆ ಭೇಟಿ ನೀಡಿದ ವೇಳೆ ಅವರ ಸಂಘದ ಪದಾಧಿಕಾರಿಗಳು ಚರ್ಚಿಸಲಾಗಿದೆ. ಅವರು ಜಲಾಶಯ ಹೂಳು ಯಾರಾದರೂ ತೆಗೆದುಕೊಂಡು ಹೋಗಬಹುದು ಎಂಬುದಾಗಿ ಮೌಖಿಕವಾಗಿ ಆದೇಶಿಸಿದ್ದು, ಅಧಿಕೃತವಾಗಿ ಸರ್ಕಾರದಿಂದ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಕೇವಲ 102 ಅಡಿ ಮಟ್ಟಕ್ಕೆ ಸೀಮಿತವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತುರ್ತಾಗಿ ಹೂಳು ತೆರವು ಕಾರ್ಯ ಕೈಗೊಂಡು ಜಲಾಶಯದ ಮೂಲ ಸಾಮರ್ಥ್ಯ ಉಳಿಸಬೇಕು ಎಂದು ಒತ್ತಾಯಿಸಿದರು.
ಜಲಾಶಯದ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದು. ಇದರಿಂದ ಜಲಾಶಯದಲ್ಲಿನ ಹೂಳು ಹೊರ ಹೋಗಲು ಸಹಕಾರವಾಗುತ್ತದೆ. ಈ ಮಹತ್ವದ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು.
ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ವಿ.ಪಿ. ಉದ್ಯಾಳ್, ಸಂಘದ ಪದಾಧಿಕಾರಿಗಳಾದ ದೊಡ್ಡ ದಾಸಪ್ಪ, ಕೊಂಚಿಗೇರಿ ರಾಜಗೌಡ, ವೀರಭದ್ರಗೌಡ, ಶ್ರೀಧರ್, ದರೂರು ಬಸವರಾಜ್, ಗೋವಿಂದಪ್ಪ ಇದ್ದರು.