ಮಂಡಳಿ ಹಣ ದುರುಪಯೋಗ

ಮಲ್ಲೇಶ್
ಮಲ್ಲೇಶ್
Published on

ಪ್ರಮುಖ ಮುಖ್ಯಾಂಶಗಳು

  • ಅಗತ್ಯವಿಲ್ಲದ ಯೋಜನೆ ಜಾರಿ
  • ಕಾರ್ಮಿಕರಿಗೆ ಹಾಗೂ ಮಂಡಳಿಗೆ ವಂಚನೆ
ಬಳ್ಳಾರಿ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ ಅಗತ್ಯವಿಲ್ಲದ ಯೋಜನೆಗಳನ್ನು ಜಾರಿಗೊಳಿಸಿ, ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲೇಶ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಮಿಕರಿಗೆ ನೀಡಲಾಗುತ್ತಿರುವ ಟೂಲ್ ಹಾಗೂ ಸೇಫ್ಟಿ ಕಿಟ್‌ಗಳ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ. ಮಾರುಕಟ್ಟೆಯಲ್ಲಿ 1,378 ರೂ. ಬೆಲೆಯ ಕಿಟ್‌ಗಳನ್ನು 3,575 ರೂ. ಗೆ ಖರೀದಿಸುವ ಮೂಲಕ ಮಂಡಳಿಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟುಮಾಡಲಾಗಿದೆ. ಕಳಪೆ ಗುಣಮಟ್ಟದ ಕಿಟ್‌ಗಳ ವಿರುದ್ಧ ಹಲವಾರು ಕಾರ್ಮಿಕ ಸಂಘಟನೆಗಳು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.
ಆರ್‌ಪಿಎಲ್ ತರಬೇತಿ ಯೋಜನೆಗೆ 100 ಕೋಟಿ ರೂ. ಮೀಸಲಿರಿಸಲಾಗಿದ್ದು, ತರಬೇತಿ ನೀಡುವ ಸಂಸ್ಥೆಗಳು ನೈಜ ತರಬೇತಿ ನೀಡದೇ ಕೇವಲ ಔಪಚಾರಿಕ ಕಾರ್ಯಕ್ರಮ ನಡೆಸಿ ಕಾರ್ಮಿಕರಿಗೆ ಹಾಗೂ ಮಂಡಳಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.
ಪ್ರಿವೆಂಟೀವ್ ಹೆಲ್ತ್ ಕೇರ್ ಚೆಕ್ ಆಪ್ ಯೋಜನೆಗೆ 940 ಕೋಟಿ ರೂ. ಗೂ ಅಧಿಕ ಹಣ ಖರ್ಚು ಮಾಡಲಾಗಿದ್ದು, ಈ ಯೋಜನೆಯಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ವೈದ್ಯಕೀಯ ತಪಾಸಣೆಯ ವರದಿಗಳನ್ನು ಕಾರ್ಮಿಕರಿಗೆ ಸಮರ್ಪಕವಾಗಿ ದೊರೆಯದೆ ಬಗ್ಗೆ ಹಲವು ದೂರುಗಳಿದ್ದರೂ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಆದ್ದರಿಂದ, ಹೆಲ್ತ್ ಕ್ಯಾಂಪ್, ಆರೋಗ್ಯ ಸಂಚಾರಿ ಕ್ಲಿನಿಕ್, ಆರ್‌ಪಿಎಲ್, ಟ್ರೈನಿಂಗ್ ವಿತ್ ಟೂಲ್ಸ್ ಕಿಟ್, ಹ್ಯೂಮಿನಿಟಿ ಕಿಟ್ ಮತ್ತು ನೋಂದಣಿ ಮಾಡಲು ಕಾರ್ಮಿಕ ಸೇವಾ ಕೇಂದ್ರದಂತ ಅನಾವಶ್ಯಕ ಯೋಜನೆಗಳನ್ನು ಸ್ಥಗಿತಗೊಳಿಸಿ, ಮೂಲಭೂತ ಯೋಜನೆಗಳಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮೆ ಮಾಡಬೇಕು. ಈ ಎಲ್ಲ ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ರಮೇಶ್, ಲಕ್ಷ್ಮಣ, ಶಿವಕುಮಾರ್, ರಾಮಾಂಜಿ, ದುರುಗಪ್ಪ, ಶರಣಪ್ಪ, ಲೋಕೇಶ್ ನಾಯ್ಕ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಮೆಹಬೂಬ್, ಬಾಬು, ಚಂದ್ರಣ್ಣ ಇದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net