ಗಣಿಗಾರಿಕೆ ರಾಜ್ಯ ಸರ್ಕಾರ ಸಂಕಷ್ಟ

ಟಪಾಲ್ ಗಣೇಶ್
ಟಪಾಲ್ ಗಣೇಶ್
Published on

ಪ್ರಮುಖ ಮುಖ್ಯಾಂಶಗಳು

  • ಸುಪ್ರಿಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆ
  • ಮೂಲ ನಕ್ಷೆ ಸಲ್ಲಿಸದೆ, ಹೊಸ ನಕ್ಷೆಗೆ ಸಹಿ

ಬಳ್ಳಾರಿ :

ಕರ್ನಾಟಕ ಹಾಗೂ ಆಂಧ್ರದ ನಡುವಿನ ಬಳ್ಳಾರಿ ಕಾಯ್ದಿರಿಸಿದ ಅರಣ್ಯ ಗಡಿ ನಿರ್ಧಾರ ಸಂಬಂಧ ರಾಜ್ಯ ಸರ್ಕಾರವೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಲಿಖಿತ ಭರವಸೆಗೆ ವಿರುದ್ಧವಾಗಿ ಸಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.

2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ 1896ರ ಮೂಲ ಅರಣ್ಯ ನಕ್ಷೆಯೇ ಗಡಿ ನಿರ್ಧಾರಕ್ಕೆ ಅಂತಿಮ ಎಂಬುದಾಗಿ ಒಪ್ಪಿಕೊಂಡಿದ್ದ ರಾಜ್ಯ ಸರ್ಕಾರ, 2022ರಲ್ಲಿ ಅದಕ್ಕೆ ತದ್ವಿ ವಿರುದ್ಧವಾದ ‘ಸ್ಟ್ರಿಪ್ ಮ್ಯಾಪ್’ ಗೆ ಸಹಿ ಹಾಕಿರುವುದು ಬಹಿರಂಗಗೊಂಡಿದೆ.
ಏನಿದು ವಿವಾದ : 2009ರಲ್ಲಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧ, 2011ರ ಏಪ್ರಿಲ್ 20ರಂದು ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸಿದ್ದರು. ರಾಜ್ಯ ಹಾಗೂ ಆಂಧ್ರ ಗಡಿಯನ್ನು 1896ರ ಮೂಲದಂತೆ ಬಳ್ಳಾರಿ ಕಾಯ್ದಿರಿಸಿದ ಅರಣ್ಯ ಅಧಿಸೂಚನೆ ನಕ್ಷೆ ಆಧಾರದಲ್ಲೇ ಗುರುತಿಸಲಾಗಿದ್ದು, ಈ ನಕ್ಷೆಯಲ್ಲಿ ಪ್ರತಿಯೊಂದು ಗ್ರಾಮದ ಗಡಿ ಗುರುತು ಹಾಗೂ ಭೌಗೋಳಿಕ ಕಾಂಟೂರ್‌ಗಳು ವಿವರವಾಗಿದೆ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಗಿತ್ತು.
ಆದರೆ, 2022ರಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯೂ ಹೊಸದಾಗಿ ’ಸ್ಟ್ರಿಪ್ ಮ್ಯಾಪ್’ ಸಿದ್ಧಪಡಿಸಿದ್ದು, ಇದಕ್ಕೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಟ್ರಿಪ್ ಮ್ಯಾಪ್‌ಗೆ ಸಹಿ ಹಾಕಿದ್ದಾರೆ. ಇದರಲ್ಲಿ 1896ರ ಮೂಲ ನಕ್ಷೆಯಲ್ಲಿದ್ದ ಗ್ರಾಮ ಗಡಿ ಗುರುತು ಮತ್ತು ಕಾಂಟೂರ್‌ಗಳ ವಿವರಗಳು ಸ್ಟ್ರಿಪ್ ಮ್ಯಾಪ್‌ನಲ್ಲಿಲ್ಲ. ಅಲ್ಲದೇ, ಅರಣ್ಯದ ಮೂಲ ನಕ್ಷೆ ಬದಿಗೊತ್ತಿ ಹೊಸ ನಕ್ಷೆಗೆ ಒಪ್ಪಿಗೆ ನೀಡಿರುವುದು ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಪ್ರಮಾಣಪತ್ರದಲ್ಲಿ ಉಲ್ಲಂಘನೆಯಾಗಿದೆ. ಶಾಸಕ ಜಿ.ಜನಾರ್ದನ ರೆಡ್ಡಿಗೆ ಸೇರಿದ ಓಬಳಾಪುರಂ ಮೈನಿಂಗ್ ಕಂಪನಿಯೂ 68.5 ಹೆಕ್ಟೇರ್ ಪ್ರದೇಶದಲ್ಲಿ ಬಳ್ಳಾರಿ ಜಿಲ್ಲೆಯ ತುಮಟಿ ಗ್ರಾಮದ ಸರ್ವೆ ನಂ. 106ರ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಪ್ರಮುಖ ಆರೋಪವಾಗಿದೆ.
ಕರ್ನಾಟಕದ ಗಣಿ ಗುತ್ತಿಗೆಗಳಾದ ಎಚ್‌ಆರ್‌ಜಿ, ಎಂಬಿಟಿ, ಎನ್‌ಆರ್ ಮತ್ತು ಟಿಎನ್‌ಆರ್ ಕಂಪನಿಗಳು 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ತೆಗೆದು 884 ಕೋಟಿ ರೂ. ನಷ್ಟದ ಹಿನ್ನಲೆ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಒಎಂಸಿ ಹಾಗೂ ಅದರ ನಿರ್ದೇಶಕರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸಿಬಿಐ ಕೋರ್ಟ್‌ನಲ್ಲಿ ಶಿಕ್ಷೆಯಾಗಿದ್ದರೂ, ಈ ನೂತನ ‘ಸ್ಟ್ರಿಪ್ ಮ್ಯಾಪ್’ ಆಧಾರದಲ್ಲಿ ಒಎಂಸಿ ಕಂಪನಿಯೂ 68.5 ಹೆಕ್ಟೇರ್ ಅಕ್ರಮ ಒತ್ತುವರಿ ಸಕ್ರಮ ಅಥವಾ ಗಡಿ ಬದಲಾಯಿಸುವ ಯತ್ನಿಸಿವೆ ಎನ್ನಲಾಗಿದೆ.
ಇತ್ತೀಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಅವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ನೀಡಿದ್ದ ನಿರ್ದೇಶನದಂತೆ, ಒಎಂಸಿ ಒತ್ತುವರಿ ತೆರವು ಹಾಗೂ 1896ರ ನಕ್ಷೆಯಂತೆ ಗಡಿ ಮರುಸ್ಥಾಪನೆ ವಿಷಯವು ಸಿಇಸಿ ಮತ್ತು ನಿ.ನ್ಯಾ.ಸುಧಾಂಶು ಧುಲಿಯಾ ಸಮಿತಿಯ ವ್ಯಾಪ್ತಿಗೆ ಬರುವುದರಿಂದ ದಾಖಲೆಗಳನ್ನು ಸಿಇಸಿಗೆ ರವಾನಿಸಲು ಶಿಫಾರಸು ಮಾಡಿದ್ದಾರೆ. ಜತೆಗೆ ಗಣಿ ಉದ್ಯಮಿಗಳಾದ ಟಪಾಲ ಗಣೇಶ್ ಮತ್ತು ಟಪಾಲ ಏಕಾಂಬರಂ ನೀಡಿದ ಮನವಿ ಉಲ್ಲೇಖಿಸಿದ್ದಾರೆ.
"

ಕೋಟ್... ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರನ್ನು ರಕ್ಷಿಸಲು ಅಧಿಕಾರಿಗಳು ಸ್ಟ್ರಿಪ್ ಮ್ಯಾಪ್ ಸಲ್ಲಿಸಿದ್ದಾರೆ. ಈ ನಕ್ಷೆಗೆ ಯಾವುದೇ ಮೂಲ ಆಧಾರಗಳಿಲ್ಲ.- ಟಪಾಲ್ ಗಣೇಶ್, ದೂರುದಾರ, ಗಣಿ ಉದ್ಯಮಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net