ಜೀವನದಲ್ಲಿ ಮಾನಸಿಕ ಆರೋಗ್ಯ ಮುಖ್ಯ

ಬಳ್ಳಾರಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಅಲಕನಂದ ಡಿ.ಮಳಗಿ ಉದ್ಘಾಟಿಸಿದರು. ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ವಿ.ಕೆ.ಮರಿಯಂಬಿ, ಡಾ. ಡಾ.ಮಲ್ಲಿಕಾರ್ಜುನ್,  ಡಾ.ಎಂ.ಶ್ರೀಧರ್, ಡಾ.ರಾಕೇಶ್ ಇದ್ದರು.
ಬಳ್ಳಾರಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಅಲಕನಂದ ಡಿ.ಮಳಗಿ ಉದ್ಘಾಟಿಸಿದರು. ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ವಿ.ಕೆ.ಮರಿಯಂಬಿ, ಡಾ. ಡಾ.ಮಲ್ಲಿಕಾರ್ಜುನ್, ಡಾ.ಎಂ.ಶ್ರೀಧರ್, ಡಾ.ರಾಕೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ
  • ಮಾನಸಿಕ ಆರೋಗ್ಯವೂ ಅತ್ಯಂತ ಮುಖ್ಯ
ಬಳ್ಳಾರಿ : ಮಾನಸಿಕ ಹಾಗೂ ನರಸಂಬಂಧಿ ತೊಂದರೆಗಳಿದ್ದಾಗ ಮನುಷ್ಯ ಸಮಾಜದಲ್ಲಿ ಗೌರವಯುತವಾಗಿ ಜೀವಿಸುವುದು ಕಷ್ಟ ಎಂದು ಡಿಎಚ್‌ಒ ಡಾ.ಅಲಕನಂದ ಡಿ.ಮಳಗಿ ಹೇಳಿದರು. ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ಆರೋಗ್ಯ ಸಮಸ್ಯೆ ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಅದು ಶಾಶ್ವತ ವೈಪಲ್ಯಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರಿಗೂ ಕೇವಲ ಶಾರೀರಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಅತ್ಯಂತ ಮುಖ್ಯ ಎಂದರು.
ಮಾನಸಿಕ ಹಾಗೂ ನರಸಂಬಂಧಿ ತೊಂದರೆಗಳಿಂದ ಉಂಟಾಗುವ ಶಾರೀರಿಕ ಸಮಸ್ಯೆಗಳನ್ನು ಗುಣಪಡಿಸಲು ಫಿಜಿಯೋಥೆರಪಿಯ ಪಾತ್ರ ಪ್ರಮುಖವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದೆ. ಸಾರ್ವಜನಿಕರು ಹಾಗೂ ರೋಗಿಗಳು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಸುಧಾರಿತ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಸುತ್ತಮುತ್ತಲಿನ ಸಾರ್ವಜನಿಕರಿಗೆ, ನೆರೆಹೊರೆಯವರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ಮನುಷ್ಯನ ದಿನನಿತ್ಯದ ಚಟುವಟಿಕೆಗಳಿಗೆ ಹಾಗೂ ಸಮಗ್ರ ಆರೋಗ್ಯಕ್ಕೆ ಮೆದುಳಿನ ಆರೈಕೆ ಅತ್ಯಂತ ಅವಶ್ಯಕ. ಮಿದುಳಿನ ಆರೋಗ್ಯ ಹದಗೆಟ್ಟರೆ ಇಡೀ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆರೋಗ್ಯಕರ ಮೆದುಳು ಇಲ್ಲದಿದ್ದರೆ ಮನುಷ್ಯ ಯಾವುದೇ ಕೆಲಸ ಸರಿಯಾಗಿ ಮಾಡಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್ ಮಾತನಾಡಿ, ದೈಹಿಕ ನೋವು ತಕ್ಷಣವೇ ಗೋಚರಿಸುತ್ತದೆ, ಆದರೆ ಮೆದುಳು ಮತ್ತು ಮಾನಸಿಕ ಸಮಸ್ಯೆಗಳು ತಡವಾಗಿ ಬೆಳಕಿಗೆ ಬರುತ್ತವೆ. ಹೀಗಾಗಿ ಆರಂಭದಲ್ಲೇ ರೋಗಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಿ, ಸಮಾಜದಲ್ಲಿ ಅರಿವು ಪಸರಿಸಲು ಕೈಜೋಡಿಸಬೇಕು ಎಂದು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ದಾನಿಗಳಿಂದ ನೀಡಲಾದ ವೈದ್ಯಕೀಯ ಉಪಕರಣಗಳನ್ನು ಉದ್ಘಾಟಿಸಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net