ಸಿರಗುಪ್ಪ: ನಗರದ ಅಭಿವೃದ್ಧಿಗೆ ಬರುವ ವಿವಿಧ ಅನುದಾನಗಳ ಸಮರ್ಪಕ ಬಳಕೆಗೆ ಸದ್ಯರ ಕಾಳಜಿ ಮುಖ್ಯ ಎಂದು ಪೌರಾಯುಕ್ತ ಗಂಗಾಧರ ಹೇಳಿದರು.
ನಗರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನಗರಸಭೆಯಲ್ಲಿ ನಡೆವ ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಸದಸ್ಯರು ಭಾಗವಹಿಸಬೇಕು. ನಗರದ ಅಭಿವೃದ್ಧಿ ಪರ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದರು. ಮೋಹನರೆಡ್ಡಿ ಪ್ರತಿಕ್ರಿಯಿಸಿ, ಅಧಿಕಾರಿಗಳು ಸಹ ಸದಸ್ಯರಿಗೆ ಸಹಕಾರ ನೀಡಿದರೆ ಎಲ್ಲರ ಸಮನ್ವದಿಂದ ನಗರದ ಅಭಿವೃದ್ಧಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಮೀರಾ ಹುಸೇನ್ ಮಾತನಾಡಿ, ನಗರದ ಆದೋನಿ ರಸ್ತೆಯ ವಿಭಜಕ ಚಿಕ್ಕದಾಗಿದ್ದು, ಅಪಘಾತ ಸಂಭವಿಸಿದಾಗ ವಿದ್ಯುತ್ ಕಂಬಗಳು ಮುರಿದು ಬಿದ್ದು ಅನಾಹುತ ನಡೆಯುತ್ತಿವೆ. ರಸ್ತೆ ವಿಭಜಕವನ್ನು ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಪೌರಾಯುಕ್ತ ಗಂಗಾಧರ, ರಸ್ತೆ ವಿಭಜಕ ವಿಸ್ತರಣೆಗೆ ಬೇಕಾದ ಅನುದಾನ ಒದಗಿಸಿ ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಲ್ಲಿಕಾರ್ಜುನ ಮಾತನಾಡಿ, ನಗರದ ಬಸ್ ನಿಲ್ದಾಣ ಹತ್ತಿರದ ನೂತನ ತರಕಾರಿ ಮಾರುಕಟ್ಟೆ ಕಟ್ಟಡ ಮೇಲಿನ ಅಡ್ಡಗೋಡೆಗಳನ್ನು ತೆರವುಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಕ್ರಮವಹಿಸುವುದಾಗಿ ಪೌರಾಯುಕ್ತ ಗಂಗಾಧರ ಹೇಳಿದರು. ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರಕ್ಕೆ ನೀರು ಪೂರೈಸುವ ಪೈಪ್‌ಗಳು ಒಡೆದಿದ್ದು, ತುರ್ತಾಗಿ ಕುಡಿವ ನೀರಿನ ಪಿವಿಸಿ ಪೈಪ್ ಮತ್ತು ಇನ್ನಿತರ ಬಿಡಿ ಭಾಗಗಳನ್ನು ಖರೀದಿಸಲು ಸದಸ್ಯರು ಅನುಮತಿ ನೀಡಬೇಕೆಂದು ಪೌರಾಯುಕ್ತ ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಗರಸಭೆ ಕಚೇರಿಯಲ್ಲಿ ಇಂಟರ್‌ಕಾಮ್ ಅಳವಡಿಕೆ, ಸಭಾಂಗಣ ಅಭಿವೃದ್ಧಿ ಕಾಮಗಾರಿ, ಜೆರಾಕ್ಸ್ ಮಷಿನ್ ಖರೀದಿ, ಕಚೇರಿ ಸಿಬ್ಬಂದಿಗೆ ಸುರಕ್ಷತಾ ಕ್ಯಾಬಿನ್ ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಬಗ್ಗೆ ಚರ್ಚೆಗಳು ನಡೆದವು.