ಬೆಳೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು

ಸಿರಗುಪ್ಪ ತಾಲೂಕಿನ ಸಿದ್ದರಾಂಪುರ ಗ್ರಾಮದ ಜಮೀನಿನಲ್ಲಿ ಬೆಳೆದಿರುವ ಸಜ್ಜೆ ಬೆಳೆ ಹಾಳಾಗಿರುವ ಬಗ್ಗೆ ಸಚಿವ ಬಿ.ನಾಗೇಂದ್ರ ಪರಿಶೀಲಿಸಿದರು. ಶಾಸಕ ಬಿ.ಎಂ.ನಾಗರಾಜ, ಡಿಸಿ ಕೆ.ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಸೋಮಸುಂದರ್, ತಹಸೀಲ್ದಾರ್ ಗೌಸಿಯಾ ಬೇಗಂ ಇತರರಿದ್ದರು
ಸಿರಗುಪ್ಪ ತಾಲೂಕಿನ ಸಿದ್ದರಾಂಪುರ ಗ್ರಾಮದ ಜಮೀನಿನಲ್ಲಿ ಬೆಳೆದಿರುವ ಸಜ್ಜೆ ಬೆಳೆ ಹಾಳಾಗಿರುವ ಬಗ್ಗೆ ಸಚಿವ ಬಿ.ನಾಗೇಂದ್ರ ಪರಿಶೀಲಿಸಿದರು. ಶಾಸಕ ಬಿ.ಎಂ.ನಾಗರಾಜ, ಡಿಸಿ ಕೆ.ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಸೋಮಸುಂದರ್, ತಹಸೀಲ್ದಾರ್ ಗೌಸಿಯಾ ಬೇಗಂ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ನಾಗೇಂದ್ರ ಭರವಸೆ

ಬಳ್ಳಾರಿ :

ಜಿಲ್ಲೆಯ ಸಂಡೂರಿನ ವಿಠಲಾಪುರ, ಕುರುಗೋಡಿನ ಸಿಂಧಗೇರಿ ಹಾಗೂ ಸಿರಗುಪ್ಪದ ಸಿದ್ದರಾಂಪುರ ಗ್ರಾಮಗಳಿಗೆ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಸಚಿವ ಬಿ.ನಾಗೇಂದ್ರ ಶುಕ್ರವಾರ ಭೇಟಿ ನೀಡಿ ಬರ ಪರಿಶೀಲನೆ ಮಾಡಿದರು.

ಬಳಿಕ ಸಚಿವ ಬಿ.ನಾಗೇಂದ್ರ ಮಾತನಾಡಿ, ಈ ಮೂರು ತಾಲೂಕುಗಳಲ್ಲಿ ಮಳೆಯಾಶ್ರೀತ ಸಣ್ಣ ಹಾಗೂ ಅತಿ ಸಣ್ಣ ರೈತರೇ ಹೆಚ್ಚಾಗಿದ್ದು, ಬರಪರಿಸ್ಥಿತಿ ತೀವ್ರವಾಗಿದೆ. ಒಂದು ಅಥವಾ ಐದು ಎಕರೆ ಒಳಗಿನ ಹಿಡುವಳಿದಾರರಿಗೆ ಕೃಷಿ ನಷ್ಟದಿಂದ ಬದುಕು ಸಾಗಿಸುವುದು ಕಷ್ಟವಾಗಿದೆ. ಈ ಕುರಿತು ಶೀಘ್ರವೇ ಸಿಎಂಗೆ ವರದಿ ಸಲ್ಲಿಸಲಾಗುವುದು ಹಾಗೂ ಮುಂಬರುವ ಸಭೆಯಲ್ಲಿ ಪರಿಹಾರ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಡೂರು ವ್ಯಾಪ್ತಿಯ ಕೈಗಾರಿಕೆಗಳಿಂದ ಧೂಳು ಹೆಚ್ಚಾಗುತ್ತಿದ್ದು, ಕೆರೆಗಳಿಗೆ ಕಲುಷಿತ ನೀರು ಬಿಡಲಾಗುತ್ತಿದೆ. ಇದರಿಂದ ಮೀನುಗಳು ಸಾಯುತ್ತಿದ್ದು, ನೀರು ಕುಡಿದ ಜನರಿಗೆ ಮೂಳೆ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕರೆಸಿ ಶೀಘ್ರವೇ ಸಭೆ ನಡೆಸಲಾಗುವುದು. ಕೈಗಾರಿಕೆಗಳು ವೈಜ್ಞಾನಿಕವಾಗಿ ಫಿಲ್ಟರ್‌ಗಳನ್ನು ಅಳವಡಿಸಿ ಮಾಲಿನ್ಯ ನಿಯಂತ್ರಿಸಲು ಕಡ್ಡಾಯಗೊಳಿಸಲಾಗುವುದು. ರೈತರು ದೂರದ ಪ್ರದೇಶಗಳಿಗೆ ಜಾನುವಾರುಗಳು ಕರೆದೊಯ್ಯುವುದು ತಪ್ಪಿಸಲು ಆಯಾ ಪಂಚಾಯಿತಿ ಮಟ್ಟದಲ್ಲೇ ಮೇವಿನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುರುಗೋಡು ಹಾಗೂ ಸಿರಗುಪ್ಪ ಭಾಗದಲ್ಲಿ ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳು ಹರಿದು ಹೋಗಿವೆ. ಹೀಗಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದರೆ ಭತ್ತ ಇತರೆ ಬೆಳೆ ನಾಟಿ ಮಾಡಲು ಅನುಕೂಲವಾಗಲಿದೆ. ಆದ್ದರಿಂದ, ಸದ್ಯದಲ್ಲಿಯೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಿಂಧಗೇರಿ ಗ್ರಾಮದ ರೈತ ಗೋವಿಂದಪ್ಪ ಮಾತನಾಡಿ, ಕೊಳವೆ ಬಾವಿ ನೆರವಿನಿಂದ ಈಗಾಗಲೇ ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ ಕೆಂಪು ರೋಗದಿಂದ ಬೆಳೆ ಹಾಳಾಗಿದೆ. ಹೀಗಾಗಿ ನಾಲೆಗೆ ನೀರು ಬಂದಾಗ ಬಿಳಿ ಜೋಳ ಬಿತ್ತನೆ ಮಾಡಬೇಕು. ಆದರೆ ಕುಡತಿನಿ ಬಳಿಯ ಡಿ7 ಉಪಕಾಲುವೆಯಿಂದ ಹರಿಸುವ ನೀರು ಸುಮಾರು ದೂರದ ಗ್ರಾಮಗಳಿಗೆ ತಲುಪುತ್ತಿಲ್ಲ ಎಂದು ಅಳಲು ತೋಡಿಕೊಂಡರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net