ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿದರು. ಮೇಯರ್ ಪಿ.ಗಾದೆಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮುಖಂಡರಾದ ಪಿ.ಗಾದಿಲಿಂಗನಗೌಡ, ಸಿದ್ದೇಶ್, ಕಲ್ಲುಕಂಭ ಪಂಪಾಪತಿ ಇದ್ದರು.
ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಜಯಂತಿಯೂ ನಾಮಕಾವಾಸ್ಥೆಗೆ ಮಾಡದೆ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಾಜಿ ಸಿಎಂ ಡಿ.ದೇವರಾಜು ಅರಸು ಅವರ ಜಯಂತಿ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಆ.20ರಂದು ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅರಸು ಅವರ ಜಯಂತಿಯ ಮುಖ್ಯ ಉದ್ದೇಶವೇ ತಳಸಮುದಾಯಗಳ ಧ್ವನಿಯಾಗುವುದು ಎಂದರು.
ವಿದ್ಯಾರ್ಥಿಗಳಲ್ಲಿ ನಿರೂಪಣೆ ಮತ್ತು ಪ್ರತಿಭೆ ಉತ್ತೇಜಿಸಲು ಕಾರ್ಯಕ್ರಮದಲ್ಲಿ ವಿಶೇಷ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಮೊರಾರ್ಜಿ ದೇಸಾಯಿ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯ ಜವಾಬ್ದಾರಿ ನೀಡಬೇಕು. ಶಾಲಾ-ಕಾಲೇಜು ಹಾಗೂ ವಸತಿ ಶಾಲೆಯಲ್ಲಿ ಅರಸು ಅವರ ಜೀವನ ಮತ್ತು ಕೊಡುಗೆ ಕುರಿತು ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಬೇಕು ಎಂದು ಹೇಳಿದರು.
ನಗರದ ಹಿಂದುಳಿದ ಹಾಗೂ ಸಣ್ಣ ಸಣ್ಣ ಸಮುದಾಯಗಳ ಏಳಿಗೆ ಮತ್ತು ಸಂಘಟನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ, ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ನಾನಾ 25 ಹಿಂದುಳಿದ ವರ್ಗಗಳ ಜಯಂತಿ ಆಚರಣೆಗೆ ತಲಾ 50 ಸಾವಿರ ರೂ. ಪ್ರೋತ್ಸಾಹ ಧನ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ವಿವಿಧ ಸಣ್ಣ-ಸಣ್ಣ ಸಮುದಾಯಗಳು, ಸಂಘ- ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಹ್ವಾನಿಸಬೇಕು. ಶಿಷ್ಟಾಚಾರದ ಪ್ರಕಾರ ಗಣ್ಯರಿಗೆ ಆಹ್ವಾನ ಪತ್ರಿಕೆ ತಲುಪಿಸಬೇಕು ಎಂದು ಸೂಚಿಸಿದರು.