ಬಳ್ಳಾರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿಯೇ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಪರಿಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತ ಸಮುದಾಯಗಳಿಗಿರುವ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಕುರಿತು ಸಮುದಾಯದ ಜನರಿಗೆ ಅರಿವು ಮೂಡಿಸಬೇಕು. ನಾನಾ ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಿರುವ ಯೋಜನೆಗಳನ್ನು ಪಟ್ಟಿಮಾಡಿಕೊಂಡು, ಅವುಗಳನ್ನು ಅವರಿಗಾಗಿಯೇ ತಲುಪಿಸಲು ಸಾಕಷ್ಟು ಪ್ರಚಾರ ಕಾರ್ಯ ಕೈಗೊಳ್ಳಬೇಕು. ಇದರಿಂದ ಸಮುದಾಯಗಳ ಜನರು ಸೌಲಭ್ಯ ಪಡೆಯಲು ಮುಂದೆ ಬರುತ್ತಾರೆ ಎಂದರು.
ನಾನಾ ಇಲಾಖೆಗಳು ನೀಡುವ ಫಲಾನುಭವಿ ಆಧಾರಿತ ಮತ್ತು ಸಮುದಾಯ ಆಧಾರಿತ ಯೋಜನೆಗಳನ್ನು ಅರ್ಹ ಅಲ್ಪಸಂಖ್ಯಾತರಿಗೆ ತಲುಪಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ಕೇಂದ್ರದ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ವಿವಿಧ ಇಲಾಖೆಗಳಲ್ಲಿನ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ಮತ್ತು ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು. ಮುಖ್ಯವಾಗಿ ಫಲಾನುಭವಿಗಳು ಅರ್ಜಿ ಹಾಕದಿರುವುದು ಎದ್ದು ಕಾಣುತ್ತಿದೆ. ಒಬ್ಬ ಫಲಾನುಭವಿ ಯಾವುದೇ ಯೋಜನೆಯಡಿ ಸಾಲ-ಸೌಲಭ್ಯ ಪಡೆಯಲು ಬ್ಯಾಂಕ್ ಗೆ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ಇರುವುದಿಲ್ಲ, ಅಧಿಕಾರಿಗಳೂ ಮಾರ್ಗದರ್ಶನ ನೀಡುವುದಿಲ್ಲ. ಇದರಿಂದ ಯೋಜನೆ ಪಡೆಯುವುದಾದರೂ ಹೇಗೆ? ಹಾಗಾಗಿ ಪೂರಕ ದಾಖಲೆ ಸಲ್ಲಿಸುವ ಕುರಿತು ಅಗತ್ಯ ನಿರ್ದೇಶನ ನೀಡಬೇಕು.
ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ತಲುಪಿಸುವ ಕಡೆ ಅಧಿಕಾರಿಗಳು ಗಮನಹರಿಸಬೇಕು. ಪ್ರತಿಯೊಬ್ಬ ನಾಗರಿಕರಿಗೂ ಎಲ್ಲ ಯೋಜನೆಗಳು ಮಾಹಿತಿ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನಗರದಲ್ಲಿ ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಬೆಳಕಿಗೆ ಬಂದಿದ್ದು, ಈವರೆಗೂ ಕ್ರಮ ಕೈಗೊಂಡಿಲ್ಲ. ಏನು ಮಾಡುತ್ತೀದ್ದೀರಿ, ಈ ಕೂಡಲೇ ಪರಿಶೀಲಿಸಿ ಸಂಬಂಧಿಸಿದ ಎಲ್ಲ ಮಾಹಿತಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದರು.
ಡಿಸಿ ನಾಗೇಂದ್ರ ಪ್ರಸಾದ್ ಕೆ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆ, ಸೌಲಭ್ಯ ಮತ್ತು ನಿಗದಿಪಡಿಸಿದ ಭೌತಿಕ-ಆರ್ಥಿಕ ಗುರಿ ಬಗ್ಗೆ ನಿರ್ದಿಷ್ಟ ಹಾಗೂ ಪೂರಕ ಮಾಹಿತಿ ಸಭೆಗೆ ನೀಡಬೇಕು ಎಂದರು.