ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಗಣಿನಾಡು ಸಮ್ಮೇಳನ ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಬೆಳಕು ಸಂಸ್ಥೆಯ ಗೌರವಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಿರೇಮಠ ಇತರರಿದ್ದರು.
ಬಳ್ಳಾರಿ : ಕಲಾ ಪ್ರಕಾರ ಯಾವುದೇ ಇರಲಿ, ಸಂಪೂರ್ಣ ತೊಡಗಿಸಿಕೊಂಡು ಪ್ರಬುದ್ಧತೆ ಪಡೆಯಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗಣಿನಾಡು ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಕಲಾವಿದರಿಗೆ ಕಲೆ, ಸಾಹಿತ್ಯ ಎಂಬ ಅರಿವು ಸಹ ಇರಬೇಕು. ಕೇವಲ ತೋರಿಕೆ ಆಗದೆ, ಕಲಾತ್ಮಕತೆ ಮೈಗೂಡಿಸಿಕೊಳ್ಳಬೇಕು. ಎಷ್ಟು ಬರೆದೆ ಎಂಬುದು ಮುಖ್ಯ ಅಲ್ಲ. ಎಷ್ಟು ಕಾಲ ಸಮಾಜಕ್ಕೆ ಪ್ರಸ್ತುತವಾಗಿದೆ ಎಂಬುದು ಅರಿಯಬೇಕು. ಲೋಕದ ಅನಿಷ್ಟತೆ ಪ್ರಶ್ನಿಸುವಂತಿರಬೇಕು. ಅಂತಹದನ್ನು ನಾವು ಶಿವ ಶರಣ ವಚನಗಳಲ್ಲಿ ಕಾಣುತ್ತೇವೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗಳು ಇಂತಹ ಸಂಸ್ಥೆ ಮೂಲಕ ಬೆಳಕಿಗೆ ಬರಬೇಕು. ಈ ಭಾಗದ ಅಭಿವೃದ್ಧಿ ಸರ್ಕಾರ, ಜನಪ್ರತಿನಿಧಿಗಳು, ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಸರ್ಕಾರದ ಅನುದಾನ ಪಡೆಯದೇ ಈ ಬೆಳಕು ಸಂಸ್ಥೆ ಕಲಾವಿದರ ಪ್ರೋತ್ಸಾಹಿಕವಾಗಿ ದಾನಿಗಳ ನೆರವಿನಿಂದಲೇ ನಡೆಸುತ್ತ ಬಂದಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮಗಳಿಂದ ಕಲಾವಿದರನ್ನು ಬೆಳಕಿಗೆ ತಂದಿದೆ, ಆನಂತರ ಅಂತಹವರನ್ನು ಸಾಹಿತ್ಯ ಪರಿಷತ್, ಸರ್ಕಾರ ಗುರುತಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಗಣ್ಯರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.ಪ್ರಮುಖರಾದ ಜೋಳದರಾಶಿ ತಿಮ್ಮಪ್ಪ, ಸಿದ್ದರಾಮ ಕಲ್ಮಠ, ಬಸವರಾಜ್ ಬಿಸಲಹಳ್ಳಿ, ಶಿವಮೂರ್ತಿ ಹಿರೇಮಠ, ಎನ್.ವೀರಭದ್ರಗೌಡ ಇದ್ದರು.