ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಎಐಎಂಎಸ್‌ಎಸ್ ಸಂಘಟನೆಯಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಡಿಸಿ ಮಹಮ್ಮದ್ ಎನ್ .ಜುಬೇರ್ ಅವರಿಗೆ ಮನವಿ ಸಲ್ಲಿಸಿದರು. ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಕೆ.ಎಂ.ಈಶ್ವರಿ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಅರುಣಾ, ವಿದ್ಯಾ, ಶಾಂತ, ಜ್ಯೋತಿ ಇತರರಿದ್ದರು. ===
ಬಳ್ಳಾರಿ : ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಅಪ್ರಾಪ್ತೆಯರೆ ಮೇಲೆ ಅತ್ಯಾಚಾರ ಖಂಡಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ವತಿಯಿಂದ ಪ್ರತಿಭಟಿಸಲಾಯಿತು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಕೆ.ಎಂ.ಈಶ್ವರಿ ಮಾತನಾಡಿ, ಪಶ್ಚಿಮ ಬಂಗಾಳದ ಬಾರುಪುರ್‌ನಲ್ಲಿ ಹನ್ನೊಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಾವಿಗೆ ತಳ್ಳಿ ಕೊಲೆ ಮಾಡಲಾಗಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಹದಿಮೂರು ವರ್ಷದ ಅಪ್ರಾಪ್ತೆಯನ್ನು ಹೋಟೆಲ್ ಮಾಲೀಕನಿಗೆ ಮಾರಿ, ನಾಲ್ಕೈದು ದಿನಗಳವರೆಗೆ ಸರಣಿ ಅತ್ಯಾಚಾರ ನಡೆಸಿರುವುದು ನೋವು ತಂದಿದೆ.
ರಾಜಸ್ಥಾನ ಸರ್ಕಾರ ಹೋಟೆಲ್‌ಗಳನ್ನು ನೆಲಸಮ ಮಾಡಿದ್ದರೂ, ಇಂತಹ ಕಣ್ಣೆರೆಸುವ ತಂತ್ರಗಳನ್ನು ಜನ ಒಪ್ಪುವುದಿಲ್ಲ. ಆರೋಪಿಗಳಿಗೆ ಶೀಘ್ರ ಹಾಗೂ ಕಠಿಣ ಕಾನೂನು ಕ್ರಮವೇ ಆಗಬೇಕು ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ ಹಾಗೂ ಮದ್ಯ-ಮಾದಕ ವಸ್ತುಗಳೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದ್ದು, ಇವುಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.