ನಾಳೆ ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ

ವಿಜಯೇಂದ್ರ
ವಿಜಯೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನಾಯಕರ ನೇತೃತ್ವದಲ್ಲಿ ಧರಣಿ
  • ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ
ಬಳ್ಳಾರಿ : ರೈತರ ವಿರುದ್ಧ ಪ್ರಕರಣ ವಾಪಸ್ ಪಡೆಯಲು ಮತ್ತು ಬಿಡದಿ ಟೌನ್‌ಶಿಪ್ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಜು.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯಿಂದ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಡದಿ ಹೋರಾಟದ ವೇಳೆ ಅಧಿಕಾರಿಗಳನ್ನು ಮಹಿಳೆಯರು ಪೊರಕೆ ಹಿಡಿದು ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರೇ ನೇರ ಹೊಣೆ. ಮುಖ್ಯಮಂತ್ರಿಯಾದ ತಕ್ಷಣವೇ ರೈತರ ಮೇಲಿನ ದಬ್ಬಾಳಿಕೆ ಹಾಗೂ ಅವರ ಬದುಕಿನ ಜೊತೆ ಆಟವಾಡುವುದನ್ನು ನಿಲ್ಲಿಸಬೇಕು. ಶಾಂತಿಯುತ ಹಾಗೂ ಪ್ರಾಮಾಣಿಕವಾಗಿ ಹೋರಾಡುತ್ತಿರುವ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೇ.70 ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯಾಗಿದ್ದ ಬೆಳೆ ಸಂಪೂರ್ಣವಾಗಿ ಒಣಗಿಹೋಗಿದೆ. ಇಂತಹ ಭೀಕರ ಬರ ಪರಿಸ್ಥಿತಿಯಲ್ಲಿ ನೊಂದ ರೈತರಿಗೆ ಸರ್ಕಾರ ಎಕರೆಗೆ ಕನಿಷ್ಠ 50 ಸಾವಿರ ರೂ.ಗಳ ಪರಿಹಾರ ನೀಡಬೇಕು. ಕೇಂದ್ರದ ಬರ ಅಧ್ಯಯನ ತಂಡವನ್ನು ಕಳುಹಿಸುವಂತೆ ಸಿಎಂ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆಯೇ? ಸಚಿವರು ಯಾಕೆ ಇನ್ನೂ ಜಿಲ್ಲಾ ಪ್ರವಾಸಗಳನ್ನು ಕೈಗೊಂಡು ಜನರ ಕಷ್ಟಗಳನ್ನು ಆಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ಸಚಿವ ಸ್ಥಾನಕ್ಕಾಗಿ ರಾಜ್ಯದ ಶಾಸಕರ ದಂಡು ದೆಹಲಿ ಪ್ರವಾಸದಲ್ಲಿದೆ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕೃಷಿ ಸಚಿವರು ಯಾರು ಎಂಬುದೇ ಗೊಂದಲದಲ್ಲಿದೆ. ಸರ್ಕಾರ ಮೊದಲು ರಾಜ್ಯದ ಕೃಷಿ ಸಚಿವ ಯಾರು ಎಂಬುದನ್ನು ಪ್ರಕಟಿಸಲಿ ಎಂದು ಲೇವಡಿ ಮಾಡಿದರು. ಕೆಆರ್‌ಎಸ್ ಜಲಾಶಯದ ವ್ಯಾಪ್ತಿಯಲ್ಲಿ ರೈತರ ಬೆಳೆಗಳಿಗೆ ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಆ.6ರಂದು ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಜಂಟಿಯಾಗಿ ಸರ್ಕಾರದ ಕಿವಿ ಹಿಂಡಲಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ರೈತರು, ಬಡವರು ಹಾಗೂ ಹಿಂದೂ ವಿರೋಧಿಯಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಉದ್ಯಮವೇ ಆದ್ಯತೆಯಾಗಿದೆಯೇ ಹೊರತು ಬಡ ರೈತರ ಅಭಿವೃದ್ಧಿಯಲ್ಲ ಎಂದು ಕಿಡಿಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net