ಬಳ್ಳಾರಿಯ ಬಂಡಿಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಮಲೇರಿಯಾ ಜಾಗೃತಿ ಜಾಥಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಚಾಲನೆ ನೀಡಿದರು. ವೈದ್ಯಾಧಿಕಾರಿಗಳಾದ ಡಾ.ಯಾಸ್ಮಿನ್, ಡಾ.ಫಾಮಿದಾ ಭಾನು, ಖುರ್ಶಿದ್ ಬೇಗಮ್, ನಾಗೇಂದ್ರಪ್ಪ, ಮರಿಬಸವನಗೌಡ, ನಾಗರಾಜ್, ಬಾಬುರಾವ್ ಇತರರಿದ್ದರು.
ಬಳ್ಳಾರಿ : ಜಿಲ್ಲೆಯನ್ನು 2027ರ ವೇಳೆಗೆ ಮಲೇರಿಯಾ ಮುಕ್ತಗೊಳಿಸಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಕರೆ ನೀಡಿದರು.
ನಗರದ ಬಂಡಿಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಮಲೇರಿಯಾ ಮುಕ್ತಗೊಳಿಸಲು ಮನೆಯ ಸುತ್ತಮುತ್ತ ಇಲಾಖೆ ವತಿಯಿಂದ ನಡೆಸುವ ಕೀಟನಾಶಕ ಸಿಂಪರಣೆಗೆ ಸಹಕರಿಸುವುದು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಮತ್ತು ಕಿಟಕಿಗಳಿಗೆ ಜಾಲರಿ ಅಳವಡಿಸುವುದು. ನೀರು ನಿಲ್ಲುವ ಸ್ಥಳಗಳಲ್ಲಿ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಬಿಡುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಯುವುದು ಸೇರಿದಂತೆ ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕಾರ್ಯಗಳಿಗೆ ಸಹಕರಿಸಬೇಕು ಎಂದು ಕೋರಿದರು.