ಹೃದಯದ ವೈಶಾಲ್ಯತೆಯಿಂದ ಜೀವನ ನಡೆಸಿ

ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಹಡಗಲಿಯ ಹಿರಿ ಶಾಂತ ವೀರಸ್ವಾಮೀಜಿ, ಶಾಸಕ ಕೆ.ನೇಮಿರಾಜ ನಾಯ್ಕ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಹಡಗಲಿಯ ಹಿರಿ ಶಾಂತ ವೀರಸ್ವಾಮೀಜಿ, ಶಾಸಕ ಕೆ.ನೇಮಿರಾಜ ನಾಯ್ಕ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗವಿಸಿದ್ಧೇಶ್ವರ
  • ಮಠದ
  • ಆವರಣ
ಹಗರಿಬೊಮ್ಮನಹಳ್ಳಿ : ದೇವರು ಮನುಷ್ಯರನ್ನು ಒಂದೇ ದೃಷ್ಟಿಯಿಂದ ಕಾಣುತ್ತಾನೆ. ಆದರೆ, ಮನುಷ್ಯ ನೋಡುವ ದೃಷ್ಟಿ ಕೋನಗಳೇ ಬೇರೆ. ಆದ್ದರಿಂದ ಮನುಷ್ಯನಿಗೆ ನೆಮ್ಮದಿ ಇಲ್ಲ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಡಬಾಳು ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆಯಡಿ 1ಕೋಟಿ ರೂ.ವೆಚ್ಚದಲ್ಲಿ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀಮಂತಿಕೆಯನ್ನು ವಸ್ತುವಿನಿಂದ ಅಳೆಯಬೇಡಿ, ಹೃದಯದ ವೈಶಾಲ್ಯತೆಯಿಂದ ಜೀವನ ನಡೆಸಬೇಕು. ಗಳಿಸಿದ ಸಂಪತ್ತು ಕೊನೇ ಗಳಿಗೆಯವರೆಗೂ ಅನುಭವಿಸುವುದು ಅಷ್ಟೇ, ನಮ್ಮ ನಿಮ್ಮ ಹಿಂದೆ ಬರುವುದು ಪುಣ್ಯ ಅಥವಾ ಪಾಪ. ಪುಣ್ಯದ ಕೆಲಸಮಾಡಿ. ಒಂದು ಸಣ್ಣ ತಪ್ಪಿನ ಹೆಜ್ಜೆ, ತೀರ್ಮಾನಗಳು, ನಿಮ್ಮೂರಿನ ಒಗ್ಗಟ್ಟು ಮುರಿದು, 30ವರ್ಷಗಳವರೆಗೆ ಅಭಿವೃದ್ಧಿ ಎನ್ನುವುದೇ ಮರೀಚಿಕೆಯಾಗಿತ್ತು.
ಆದರೆ,ಈಗ ತಿಳಿಯಾಗಿ ಮುಂದೆ ಒಗ್ಗಟ್ಟಿನಿಂದ ಶಾಸಕರನ್ನೊಳಗೊಂಡು ಅಭಿವೃದ್ಧಿಯತ್ತ ಚಿಂತನೆ ನಡೆಸಿ. ಫೆ.11ರಂದು ಕಡಲಬಾಳು ಶಾಖಾ ಮಠಕ್ಕೆ ಕೊಪ್ಪಳದಲ್ಲಿ ಪ್ರಶಾಂತ ಸ್ವಾಮಿಗೆ ಪಟ್ಟಾಧಿಕಾರ ನೀಡುತ್ತೇವೆ. ಫೆ.16ರಂದು ಕಡಲಬಾಳು ಗ್ರಾಮದಲ್ಲಿ ಶಾಖಾಮಠದಲ್ಲಿ ಪಟ್ಟಾಧಿಕಾರ ಸಮಾರಂಭ ಮಾಡಲಾಗುವುದು ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಮನುಷ್ಯ ಎಂದಿಗೂ ಕಾಯಕದಲ್ಲಿ ಇರಬೇಕು. ಇಂದಿಗೂ ಆಧ್ಯಾತ್ಮಿಕ ಚಿಂತನೆಗಳು ಕಡಿಮೆಯಾಗಿಲ್ಲ. ಹೆಚ್ಚೆಚ್ಚು ಆಧ್ಯಾತ್ಮಿಕ ಚಿಂತನೆಗಳು ಬೆಳೆಯಲಿ. ಯುವಕರು ಅದರತ್ತ ಗಮನ ಹರಿಸಲಿ ಎಂದರು.
ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿ ಮಠವೊಂದು ಕುಂಭ ಮೇಳವಾಗಿದೆ. ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೊಪ್ಪಳದ ಗವಿಮಠದಲ್ಲಿ ನಾವು ಕಾಣುತ್ತೇವೆ ಎಂದರು.
ಪ್ರಶಾಂತ ಮರಿಸ್ವಾಮೀಜಿ, ವೀರೇಶ ಮರಿಸ್ವಾಮೀಜಿ ಇದ್ದರು. ಇದಕ್ಕೂ ಮೊದಲು, ಸ್ವಾಮೀಜಿಯವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಗ್ರಾಮದ ಮನೆಯ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿರುವುದು ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net