ಆರೋಪ : ಏ.29ರಂದು ತೀವ್ರ ಹೊಟ್ಟೆನೋವಿನ ಕಾರಣದಿಂದ ಹನುಮಂತುನನ್ನು ಜೈಲಿನಿಂದ ಬಿಮ್ಸ್‌ಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಈ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುದಾಗಿ ಮೃತನ ತಂಗಿ ಮರಿಯಮ್ಮ ಆರೋಪಿಸಿದ್ದಾರೆ. ಮೇ.6ರಂದು ತಡರಾತ್ರಿ ಪೊಲೀಸರು ಕರೆ ಮಾಡಿ ಹನುಮಂತು ಮೃತಪಟ್ಟಿರುವುದಾಗಿ ವಿಷಯ ತಿಳಿಸಿದ್ದಾರೆ. ಅನಾರೋಗ್ಯದ ಬಗ್ಗೆ ಮೊದಲೇ ಮಾಹಿತಿ ನೀಡದ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ನಾಲ್ಕು ತಿಂಗಳಿನಿಂದ ಬಳ್ಳಾರಿ ಜೈಲಿನಲ್ಲಿ ಅಣ್ಣ ಆರೋಗ್ಯವಾಗಿದ್ದ. ಈಗ ಏಕಾಏಕಿ ಸಾವು ಸಂಭವಿಸಿರುವುದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಮತ್ತು ಜೈಲು ಸಿಬ್ಬಂದಿ ಮಾಹಿತಿ ನೀಡದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಮರಿಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣ್ಣನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನಮಗೆ ನ್ಯಾಯ ಸಿಗಬೇಕು ಎಂದು ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.