ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹೊಸ ಕಾಮಗಾರಿಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾ ಸಂಚಾಲಕಿ ಎಸ್.ಅಕ್ಕಮಹಾದೇವಿ, ಪವಿತ್ರಾ, ಗಂಗಮ್ಮ, ಶಾರದಮ್ಮ, ಪದ್ಮಾವತಿ, ಹನಮಂತಪ್ಪ, ಜಂಬಣ್ಣ, ರಶ್ಮಿ, ಲಲಿತಾ, ಮಂಗಳಾ, ಕೊಟ್ರೇಶ್ ಇತರರಿದ್ದರು.
ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕಿ ಎಸ್.ಅಕ್ಕಮಹಾದೇವಿ ಹೇಳಿಕೆ
ಹಗರಿಬೊಮ್ಮನಹಳ್ಳಿ: ನರೇಗಾ ಕಾರ್ಮಿಕರಿಗೆ ಕೂಲಿ ಮೊತ್ತ ಪಾವತಿಯಾಗುತ್ತಿಲ್ಲ. ಕೂಡಲೆ ಬಾಕಿ ಮೊತ್ತ ಪಾವತಿಸಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕಿ ಎಸ್.ಅಕ್ಕಮಹಾದೇವಿ ಆಗ್ರಹಿಸಿದರು.
ಬನ್ನಿಕಲ್ಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹೊಸ ಕಾಮಗಾರಿ ಕೈಗೊಳ್ಳಬೇಕು ಮತ್ತು ಬಾಕಿ ಕೂಲಿ ಮೊತ್ತ ಪಾವತಿಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮತ್ತು ಕೂಲಿಕಾರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಂಗಳವಾರ ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನಿರಂತರ ನೂರು ದಿನ ಉದ್ಯೋಗ ದೊರಕುತ್ತಿಲ್ಲ, ಇದರಿಂದ ಕೂಲಿಕಾರರ ಬದುಕು ಅತಂತ್ರವಾಗಿದೆ. ಕೂಡಲೇ ಗೋಕಟ್ಟೆ, ಕೆರೆ, ಕಾಲುವೆಗಳ ಅಭಿವೃದ್ಧಿ ಕಾಮಗಾರಿ ಕ್ರಿಯಾಯೋಜನೆ ರೂಪಿಸಬೇಕು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಕೂಲಿ ಕಾರ್ಮಿಕರ ಶುಶ್ರೂಷೆ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮಹಿಳೆ ಶಕುಂತಲಾ ಮಾತನಾಡಿ, ಬೇಸಿಗೆಯ ಅತಿಯಾದ ತಾಪಮಾನ ಹಿನ್ನೆಲೆಯಲ್ಲಿ ಕೆಲಸದ ಪ್ರಮಾಣದಲ್ಲಿ ಶೇ.30 ರಿಯಾಯಿತಿ ನೀಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ನಿಂಗಪ್ಪ, ವೀರಸಂಗಯ್ಯ, ಮಂಜುನಾಥ್, ರೇಣುಕಮ್ಮ, ಲೋಕೇಶ್, ಸಿದ್ದೇಶ ಮತ್ತಿತರರು ಇದ್ದರು.