ಕಂಪ್ಲಿ: ಜಾತಿ ತಾರತಮ್ಯಕ್ಕೆ ಒಳಗಾಗಿರುವ ಮಡಿವಾಳ ಸಮುದಾಯವನ್ನು ಎಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಮಡಿವಾಳ ಹುಲುಗಪ್ಪ ಆಗ್ರಹಿಸಿದರು.
ತಹಸಿಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿ, ರಾಜ್ಯದ ಮಡಿವಾಳರನ್ನು ಎಸ್ಸಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ತಾಲೂಕಿನ ಮಡಿವಾಳರಿಗೆ ಧೋಬಿಘಾಟ್, ಆಶ್ರಯ ಮನೆ ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕು ಎಂದರು.
ಉಪನ್ಯಾಸಕ ಹುಲಿಗೇಶ ಬಾದರ್ಲಿ ಮಾತನಾಡಿ, ಕಲ್ಯಾಣ ಕ್ರಾಂತಿಯಲ್ಲಿ ಶರಣರ ವಚನಕಟ್ಟುಗಳನ್ನು ಸಂರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಪ್ರಮುಖವಾಗಿದ್ದು, ಅವರ ವಿಚಾರಧಾರೆಯನ್ನು ಯುವಜನತೆಗೆ ತಿಳಿಸುವ ಅಗತ್ಯತೆವಿದೆ ಎಂದರು.