ಬಾದನಹಟ್ಟಿ ಗ್ರಾಮದಲ್ಲಿ ಸೂರಿಲ್ಲದ ಜನರಿಗೆ ನಿವೇಶ ಹಂಚಿಕೆ ಮಾಡುವಂತೆ ಒತ್ತಾಯಿಸಿ ಕುರುಗೋಡಿನಲ್ಲಿ ತಹಸೀಲ್ದಾರ್ ನರಸಪ್ಪಗೆ ತಾಲೂಕು ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಕುರುಗೋಡು: ಬಾದನಹಟ್ಟಿ ಗ್ರಾಮದ ಹರಿಜನ ಕಾಲನಿಯಲ್ಲಿ ಖಾಲಿ ಇರುವ ಸರ್ಕಾರಿ ಜಾಗವನ್ನು ಸೂರಿಲ್ಲದ ಜನರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ತಾಲೂಕು ಘಟಕದಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನರಸಪ್ಪ ಮತ್ತು ತಾಪಂ ಇಒ ನಿರ್ಮಲಾಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಕೆಕೆಆರ್‌ಡಿಬಿಯಿಂದ ಕೈಗೊಂಡಿರುವ ಗ್ರಾಮದ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಹಾಳಾದ ಮನೆಯ ಮಾಲೀಕರಿಗೆ ಸ.ನಂ 251 ರಲ್ಲಿ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಸ.ನಂ 251ರ ಹರಿಜನ ಕಾಲನಿಯ ಎರಡು ಎಕರೆ ಪ್ರದೇಶದಲ್ಲಿ ವಿಮುಕ್ತ ದೇವದಾಸಿಯರಿಗೆ 1.30 ಎಕರೆ ಹಂಚಿಕೆ ಮಾಡಲಾಗಿದೆ. ಹಲವು ವರ್ಷದಿಂದ ಸೂರಿಲ್ಲದೆ ಬದುಕುತ್ತಿರುವ ಹತ್ತಾರು ಕುಟುಂಬಗಳು ಉಳಿದ ಭೂಮಿ ಆಶ್ರಯಿಸಿದ್ದಾರೆ. ಒಂದು ವೇಳೆ ನಿವೇಶನ ಬೇರೆಯವರಿಗೆ ನೀಡಿದರೆ ಸೂರಿಲ್ಲದವರ ಬದುಕು ಬೀದಿಗೆ ಬೀಳಲಿದೆ. ಹೀಗಾಗಿ ಸೂರಿಲ್ಲದವರಿಗೆ ಆದ್ಯತೆ ನೀಡಬೇಕು. ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಆಗ್ರಹಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾದ ಕಲ್ಲುಕಂಬ ಬಾಬು, ರಾಮಾಂಜಿನಿ, ಕರಿಬಸವ, ಕರಿಯಪ್ಪ, ಬಿಳಿಬಾಯಪ್ಪ ಇದ್ದರು.