ಶೋಷಣೆಗೆ ಒಳಗಾದವರು ಪರಿಹಾರ ಪಡೆದುಕೊಳ್ಳಲಿ

ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್ ಮಾತನಾಡಿದರು.
ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್ ಮಾತನಾಡಿದರು.
Published on
ಸಿರಗುಪ್ಪ: ಮಹಿಳೆಯರ ಸಬಲೀಕರಣವೇ ನವ ಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯವಾಗಿದೆ. ಮಹಿಳೆಯರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಮೂಲಕ ಅವರ ಕನಸುಗಳಿಗೆ ಬೆಂಬಲ ನೀಡಿ ಸಾಧನೆಗೆ ಕೈಜೋಡಿಸಬೇಕೆಂದು ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಸ್ವಾವಲಂಬನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ತುಂಬಬೇಕು. ಸಂವಿಧಾನದಲ್ಲಿ ವಿಶೇಷವಾಗಿ ನೀಡಲಾಗಿರುವ ಸೌಲಭ್ಯಗಳ ಕುರಿತು ಮಹಿಳೆಯರು ತಿಳಿದುಕೊಂಡಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಮಹಿಳೆಯರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಗುರುತಿಸಿ ಗೌರವಿಸಲು, ಲಿಂಗ ಸಮಾನತೆ, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಲು ಹಾಗೂ ಮಹಿಳೆಯರ ಕಠಿಣ ಪರಿಶ್ರಮ, ಪ್ರೀತಿ ಮತ್ತು ಕೊಡುಗೆಗಳನ್ನು ಗೌರವಿಸಲು ಮಹಿಳಾ ದಿನ ಆಚರಿಸಲಾಗುತ್ತದೆ. ಶೋಷಣೆಗೆ ಒಳಗಾದ ಮಹಿಳೆಯರು ಕಾನೂನು ಸೇವಾ ಸಮಿತಿ ಮೂಲಕ ಪರಿಹಾರ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶ ಅಶೋಕ ಆರ್.ಎಚ್ ತಿಳಿಸಿದರು.
ತಹಸೀಲ್ದಾರ್ ಗೌಸಿಯಾ ಬೇಗಂ ಮಾತನಾಡಿ, ಶಕ್ತಿ, ಸಹನೆ ಮತ್ತು ಸಾಧನೆಯ ಪ್ರತೀಕವಾದ ಮಹಿಳೆಯರಿಗೆ ಈ ದಿನ ಸಮರ್ಪಿತವಾಗಿದೆ. ಮಹಿಳೆಯರು ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ಅವರು ಸಮಾಜದ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದ್ದಾರೆ. ತ್ಯಾಗ, ಪ್ರೀತಿ ಮತ್ತು ಪರಿಶ್ರಮದಿಂದ ಸಮಾಜವನ್ನು ಉತ್ತಮ ದಾರಿಗೆ ನಡೆಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಸಾಮರ್ಥ್ಯ ತೋರಿಸಿ ಹೊಸ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದರು.
ಸಮಾನತೆ, ಗೌರವ ಮತ್ತು ಅವಕಾಶಗಳೊಂದಿಗೆ ಮಹಿಳೆಯರು ಮುಂದುವರಿದಾಗ ಸಮಾಜವೂ ಶಕ್ತಿಶಾಲಿಯಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ, ಸಮಾನ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಸುಧಾರಿಸುವ ಮೂಲಕ ಮಹಿಳೆಯರ ಉನ್ನತಿಗೆ ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಗೌಸಿಯಾ ಬೇಗಂ ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ, ಉಪಾಧ್ಯಕ್ಷ ಶರೀಫ್ ಸಾಬ್, ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ, ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮಂಜುಳಾ, ವಕೀಲೆ ಹೇಮಲತಾ, ತಾ.ಪಂ ಇಒ ಪವನ್ ಕುಮಾರ್ ದಂಡಪ್ಪನವರ್, ಸಿಡಿಪಿಒ ಪ್ರದೀಪ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net