ಹೂವಿನಹಡಗಲಿ: ಸಂವಿಧಾನದ ನಿಯಮಗಳನ್ನು ಪಾಲಿಸುವ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಎಲ್ಲರೂ ಶ್ರಮಿಸೋಣ ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ದೇಶವನ್ನು ಮುನ್ನಡೆಸಲು ಸಂವಿಧಾನ ಅವಶ್ಯವಾಗಿದೆ. ಸ್ವಾತಂತ್ರ್ಯಪೂರ್ವದಲ್ಲೇ ಸಂವಿಧಾನ ರಚನೆಗೆ ಅನೇಕ ಪ್ರೇರಣೆಗಳು ದೊರೆತಿವೆ. ಸಂವಿಧಾನಕ್ಕೆ ನಾವು ಧಕ್ಕೆ ತರುವ ಕೆಲಸ ಮಾಡಬಾರದು ಎಂದರು.
ಶಾಸಕ ಕೃಷ್ಣನಾಯ್ಕ ಮಾತನಾಡಿ,ದೇಶದ ಸಂವಿಧಾನ ಸಾಮಾನ್ಯ ಮನುಷ್ಯನೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಶಕ್ತನಾಗಲು ಸಹಕರಿಸುತ್ತದೆ. ಎಲ್ಲ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಪರಮೇಶ್ವರಪ್ಪ, ಸಿಪಿಐ ದೀಪಕ್ ಆರ್.ಭೂಸರೆಡ್ಡಿ, ಸಮಾಜ ಕಲ್ಯಾಧಿಕಾರಿ ಆನಂದ್ ಡೊಳ್ಳಿನ್, ಸಿಡಿಪಿಒ ರಾಮನಗೌಡ, ಬಿಇಒ ಮಹೇಶ್ ಪೂಜಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ, ಪುರಸಭೆ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಇತರರಿದ್ದರು.