ಯುವಜನಾಂಗ ದುಶ್ಚಟಗಳಿಂದ ದೂರವಿರಲಿ

ಸಿರಗುಪ್ಪ ತಾಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಪೊಂಪಯ್ಯ ತಾತ ಅವರ 34ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಉದ್ಘಾಟಿಸಿದರು.
ಸಿರಗುಪ್ಪ ತಾಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಪೊಂಪಯ್ಯ ತಾತ ಅವರ 34ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಉದ್ಘಾಟಿಸಿದರು.
Published on
ಸಿರಗುಪ್ಪ: ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿರುವುದು ಪುಣ್ಯದ ಕೆಲಸ. ಇತ್ತೀಚಿನ ದಿನಮಾನಗಳಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗಿದ್ದು, ಸಾರ್ವಜನಿಕರು ಉಚಿತ ಶಿಬಿರಗಳಲ್ಲಿ ಭಾಗವಹಿಸುವುದರ ಮೂಲಕ ಉಪಯೋಗ ಪಡೆದುಕೊಳ್ಳಬೇಕೆಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ಬಂಡ್ರಾಳ್ ಗ್ರಾಮದಲ್ಲಿ ಪೊಂಪಯ್ಯ ತಾತ ಅವರ 34ನೇ ಪುಣ್ಯಸ್ಮರಣೆ ಅಂಗವಾಗಿ ಶ್ರೀ ಪೊಂಪಯ್ಯ ತಾತ ಸೇವಾ ಟ್ರಸ್ಟ್, ತಾಲೂಕು ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾರಾವಿ ಹಾಗೂ ವೈದೇಹಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಪೂಜ್ಯರ ಪುಣ್ಯಸ್ಮರಣೆ ಅಂಗವಾಗಿ ಆರೋಗ್ಯ ಶಿಬಿರ ಆಯೋಜಿಸಿರುವುದು ಪುಣ್ಯದ ಕೆಲಸವಾಗಿದೆ. ಗ್ರಾಮೀಣ ಭಾಗದ ಸಾಮನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇಂತಹ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಸಾಧ್ಯ. ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಹಲವು ರೋಗಗಳಿಗೆ ಕಾರಣವಾಗುತ್ತಿವೆ. ದುಶ್ಚಟಗಳಿಂದ ಯುವ ಜನಾಂಗ ದೂರವಿರಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಪೊಂಪಯ್ಯ ತಾತ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಮೃತ್ಯುಂಜಯಸ್ವಾಮಿ ಮಾತನಾಡಿ, ಪೊಂಪಯ್ಯತಾತ ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ವರ್ಷ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದೇವೆ. ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನವಾಗಿದ್ದು, ಇದರಲ್ಲಿ ಭಾಗವಹಿಸುವ ಮೂಲಕ ಉಪಯೋಗ ಪಡೆದುಕೊಳ್ಳಬೇಕು. ಆರೋಗ್ಯವೇ ನಿಜವಾದ ಸಂಪತ್ತಾಗಿದೆ. ಆರೋಗ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಬಡವರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ದುಸ್ತರವಾಗಿದೆ ಎಂದರು.
ಶಿಬಿರದ ಮುಖ್ಯಸ್ಥ ಕೆ.ಮಲ್ಲಿಕಾರ್ಜುನ ಹಚ್ಚೊಳ್ಳಿ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವವರಿಗೆ ಹೃದಯ, ನರರೋಗ, ಕಣ್ಣು, ಕಿಡ್ನಿ, ಕ್ಯಾನ್ಸರ್ ಸಮಸ್ಯೆಯ ತಪಾಸಣೆಯೊಂದಿಗೆ ಉಚಿತ ಔಷಧ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಬಂಡ್ರಾಳ್ ಮತ್ತು ಸುತ್ತಮುತ್ತಲಿನ ಹಳ್ಳಿಯ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಹಚ್ಚೋಳ್ಳಿ ಮುತ್ತಿಪೆಂಡೆಮಠದ ಶಿವರುದ್ರತಾತ, ವೈದರು, ಸಾರ್ವಜನಿಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net