ಕಂಪ್ಲಿ: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಪಾಲಕರು ಮುಂದಾಗಬೇಕೆಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಪೋಲಿಯೋ ಲಸಿಕೆ ನೀಡುವಲ್ಲಿ ಅಧಿಕಾರಿಗಳು-ಸಿಬ್ಬಂದಿಯೊಂದಿಗೆ ಪಾಲಕರು ಸಮನ್ವಯ ಸಾಧಿಸಬೇಕು ಎಂದರು.
ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ 5490 ಮಕ್ಕಳಿದ್ದಾರೆ. ಲಸಿಕೆ ಹಾಕಲು 27 ಬೂತ್, ಮೂರು ಟ್ರಾನ್ಸಿಟ್ ಬೂತ್‌ಗಳು ಹಾಗೂ ಆರು ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ತಾಲೂಕಿನಲ್ಲಿ 15,551 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 95 ಬೂತ್, ಮೂರು ಟ್ರಾನ್ಸಿಟ್ ಬೂತ್‌ಗಳನ್ನು ರಚಿಸಿದ್ದು, 82 ತಂಡಗಳು ಹಾಗೂ 17ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ, ಡಾ.ಮಲ್ಲೇಶಪ್ಪ, ತಾಲೂಕು ಆರೋಗ್ಯ ನಿರೀಕ್ಷಕ ಪಿ.ಬಸವರಾಜ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಚನ್ನಬಸಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಸಿಬ್ಬಂದಿ ಇದ್ದರು.