ಸಭೆಗೆ ಅಧಿಕಾರಿಗಳು ಖುದ್ದು ಹಾಜರಾಗಲಿ

ಕೂಡ್ಲಿಗಿಯಲ್ಲಿ ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಪಂ ಇಒ ನರಸಪ್ಪ ಇದ್ದರು.
ಕೂಡ್ಲಿಗಿಯಲ್ಲಿ ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಪಂ ಇಒ ನರಸಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೂಡ್ಲಿಗಿ ತಾಲೂಕು ಪಂಚಾಯಿತಿ
  • ಪ್ರಗತಿ ಪರಿಶೀಲನಾ ಸಭೆ
  • ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಅಧ್ಯಕ್ಷತೆ

ಕೂಡ್ಲಿಗಿಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಾರ್ಕಂಡೇಯ ತಾಕೀತು

ಕೂಡ್ಲಿಗಿ: ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಬೇಕಾಬಿಟ್ಟಿ ಮಾಹಿತಿ ನೀಡಿದರೆ ಸಭೆಯ ಔಚಿತ್ಯವೇನು ಎಂದು ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಆಯಾ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಸಿಬ್ಬಂದಿಯನ್ನು ಕಳುಹಿಸಿದರೆ ಅವರಿಗೆ ಇಲಾಖೆಯ ಸಮಗ್ರ ಮಾಹಿತಿ ಇರುವುದಿಲ್ಲ ಎಂದು ಹೇಳಿದರು.
ಪ್ರಸಕ್ತ ತಿಂಗಳಲ್ಲಿ ಎಷ್ಟು ಬಾಲ್ಯ ವಿವಾಹ ತಡೆದಿದ್ದೀರಿ ಎಂದು ಸಿಡಿಪಿಒ ಮಾಲುಂಬಿಯನ್ನು ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಪ್ರಶ್ನಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮಾಲುಂಬಿ ಐದು ಬಾಲ್ಯವಿವಾಹ ತಡೆಗಟ್ಟಿದ್ದು, ಒಬ್ಬ ಬಾಲಕಿಗೆ 13 ವರ್ಷ ವಯಸ್ಸಿರುವ ಕಾರಣಕ್ಕೆ ಕಾನಹೊಸಹಳ್ಳಿ ಬಿಸಿಎಂ ವಸತಿನಿಲಯಕ್ಕೆ ಕಳುಹಿಸಲಾಗಿತ್ತು. ಅಧಿಕಾರಿಗಳು ವಸತಿನಿಲಯದಲ್ಲಿ ಪ್ರವೇಶ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಬಾಲಕಿ ಶಾಲೆ ಬಿಡುವ ಸಂದರ್ಭ ಎದುರಾಗಿದೆ. ವಸತಿನಿಲಯದಲ್ಲಿ ಬಾಲಕಿಗೆ ಪ್ರವೇಶ ಕಲ್ಪಿಸಬೇಕೆಂದು ಕೋರಿದರು.
ಬಿಸಿಎಂ ಅಧಿಕಾರಿ ಅಹಮದ್ ಸಾಬ್ ಬಾಲಕಿಗೆ ಹಾಸ್ಟೆಲ್‌ನಲ್ಲಿ ಪ್ರವೇಶ ನೀಡಲು ಸಮ್ಮತಿಸಿದರು. ಆಡಳಿತಾಧಿಕಾರಿ ಮಾರ್ಕಂಡೇಯ ಮಾತನಾಡಿ, ಇಂತಹ ವಿಶೇಷ ಪ್ರಕರಣಗಳಲ್ಲಿ ನಿಯಮ ಸಡಿಲಿಸಿ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಬಾಲಕಿ ಶಾಲೆಯಿಂದ ಹೊರಗುಳಿಯಬೇಕಾಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಅಪೌಷ್ಟಿಕ ಮಕ್ಕಳು ಎಷ್ಟು ಜನರಿದ್ದಾರೆ ಹಾಗೂ ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರ ಸರಿಯಾಗಿ ನೀಡುತ್ತಿದ್ದೀರಾ ಎಂದು ಮಾರ್ಕಂಡೇಯ ಪ್ರಶ್ನಿಸಿದರು. ಈ ಕುರಿತು ಪ್ರತಿಕ್ರಿಯಿಸಿ ಸಿಡಿಪಿಒ ಮಾಲುಂಬಿ, ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ಸರ್ಕಾರದ ನಿಯಮದಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೂಲದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ, ವಿದ್ಯುತ್ ಪರಿವರ್ತಕ ಸುಟ್ಟರೆ ಜೆಸ್ಕಾಂ ಲೈನ್‌ಮೆನ್‌ಗಳು ನಮಗೆ ಸಂಬಂಧವಿಲ್ಲ. ಯಾರನ್ನಾದರೂ ಕರೆಸಿ ದುರಸ್ತಿ ಮಾಡಿಸಿಕೊಳ್ಳಿ ಎನ್ನುತ್ತಾರೆ ಇಲ್ಲವೇ ಮೊಬೈಲ್ ಸ್ವಿಚ್ ಆಫ್ ಮಾಡುತ್ತಾರೆ ಎಂದು ಪಿಡಿಒ ಭರತ್ ಕುಮಾರ್ ದೂರಿದರು.
ಈ ಕುರಿತು ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ಏಕಾಂತ್‌ರೆಡ್ಡಿ, ಈ ಬಗ್ಗೆ ಲೈನ್‌ಮೆನ್‌ಗಳಿಗೆ ಸೂಕ್ತ ನಿರ್ದೆಶನ ನೀಡುವೆ. ಮುಂದೆ ಈ ರೀತಿ ಆಗದಂತೆ ಕ್ರಮವಹಿಸುವೆ ಎಂದು ತಿಳಿಸಿದರು. ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಪಂ ಇಒ ನರಸಪ್ಪ, ಪಿಡಿಒಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net